ಶ್ರೀರಂಗಪಟ್ಟಣ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಈಗಿನ ಆಧುನಿಕ ಜಗತ್ತಿಗೆ ಅವರಲ್ಲಿ ಕಲೆ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕ್ರಿಯಾತ್ಮಕ ತರಬೇತಿ ನೀಡಿ ಸನ್ನದ್ಧಗೊಳಿಸಬೇಕಿರುವುದು ಶಾಲಾ ಆಡಳಿತ ಮಂಡಳಿಯ ಆದ್ಯ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಮಹೇಶ್ ತಿಳಿಸಿದರು.
ಪಟ್ಟಣದ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ರಸಪ್ರಶ್ನೆ ವಿಜೇತರಿಗೆ ಮತ್ತು ಪ್ರಸಕ್ತ ಸಾಲಿನ ಶಾಲಾ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಕರಾಟೆ, ಚಿತ್ರಕಲೆ, ಫೋಟೋಗ್ರಫಿಯಂತಹ ಕೌಶಲಯುತ ಕಲೆಗಳಲ್ಲೂ ಮುಂದುವರಿದು ಅತ್ಯಂತ ಶಿಸ್ತಿನ ನಡೆ ಅಳವಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿಯಾಗಿದ್ದು, ಇದರಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ಅಧ್ಯಕ್ಷರು ಕೈಗೊಂಡಿರುವ ಕಾರ್ಯಗಳಲ್ಲಿ ಬದ್ಧತೆ ತೋರಿದೆ. ಮುಂದೆ ವಾರ್ಷಿಕ ಪರೀಕ್ಷೆಗಳು ಎದುರಾಗಲಿದ್ದು, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲೂ ತಮ್ಮ ಸಾಮರ್ಥ್ಯ ಮೆರೆದು ಉತ್ತಮ ಫಲಿತಾಂಶ ನೀಡಬೇಕು ಎಂದು ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣ ಸಂಯೋಜಕಿ ಬಿ.ಕೆ.ಪ್ರತಿಮಾ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಜತೆಗೆ ಅವರನ್ನು ಈಗಿನ ಆಧುನಿಕತೆಯ ಜಗತ್ತಿಗೆ ಒಬ್ಬ ಪ್ರಜ್ಞಾವಂತ, ಜವಾಬ್ದಾರಿಯುತ ಮತ್ತು ಸಮಯಪ್ರಜ್ಞೆ ಕಾಯ್ದುಕೊಳ್ಳುವ ಪ್ರಜೆಯನ್ನಾಗಿ ಸನ್ನದ್ಧಗೊಳಿಸುವ ಮೂಲಕ ಮಕ್ಕಳ ಪಾಲಕರ ನಂಬಿಕೆ ಗಳಿಸಬೇಕಿದೆ. ಈ ನಿಟ್ಟಿನಲ್ಲಿ ರಿವರ್ ವ್ಯಾಲಿ ಕಿರಿಯ ಪ್ರಾಥಮಿಕ ಹಂತದಿಂದ ಪಿಯುಸಿ ಕಾಲೇಜಿನವರೆಗೂ ದೃಢತೆ ಕಾಯ್ದುಕೊಂಡಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕಸಾಪ ನಗರ ಘಟಕದ ಅಧ್ಯಕ್ಷೆ ಲಯನ್ ಸರಸ್ವತಿ ಮಾತನಾಡಿ, ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆ ತಮ್ಮ ಮತ್ತು ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ 750 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾಗಿದ್ದರು. ಮುಂದೆ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸುವುದಾಗಿ ತಿಳಿಸಿರುವುದು ಸಂತಸ ತಂದಿದೆ. ಜತೆಗೆ ಇಂದು ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೂ ಕ್ರೀಡಾಕೂಟ ಆಯೋಜಿಸಿ ಅವರಲ್ಲೂ ಕ್ರೀಡಾಸ್ಫೂರ್ತಿಯೊಂದಿಗೆ ರಂಜಿಸಿ ಅನ್ಯೋನ್ಯತೆ ಬೆಳಸುತ್ತಿರುವುದು ಶಾಲೆಯ ಕ್ರಿಯಾತ್ಮಕ ನಡೆಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ್, ಮ್ಯಾನೇಜಿಂಗ್ ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯ, ಕಾಲೇಜು ಪ್ರಾಂಶುಪಾಲ ರಾಘವೇಂದ್ರ, ಮುಖ್ಯಶಿಕ್ಷಕಿಯರುಗಳಾದ ಸಂಧ್ಯಾ ರವೀಂದ್ರ ಹಾಗೂ ಸ್ಪಂದನಾ ಸೇರಿದಂತೆ ಸಹ ಶಿಕ್ಷಕರ ವೃಂದ ಇತರರು ಉಪಸ್ಥಿತರಿದ್ದರು.