ಹಳೆಯೂರು ಗ್ರಾಮದಲ್ಲಿ ಮೇವಿಗಾಗಿ ನಾಟಿ ಹಸುಗಳು ಪರದಾಡುತ್ತಿರುವುದು. 
ಜಿಲ್ಲೆ

ಜಾನುವಾರುಗಳಿಗೆ ಮೇವು, ನೀರು ಒದಗಿಸಿ

ನಾಗೇಶ ಎಸ್

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮ.ಬೆಟ್ಟದ ತಪ್ಪಲಿನ ಹಳೆಯೂರು, ತೊಳಸಿಕೆರೆ, ಪಡಸಲನತ್ತ, ಇಂಡಿಗನತ್ತ ಸೇರಿದಂತೆ ಈ ಭಾಗದ ಇತರ ಗ್ರಾಮಗಳಲ್ಲಿ ಬಹುತೇಕ ರೈತರು ನಾಟಿ ಹಸುಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಈ ಹಿಂದೆ ಸಮರ್ಪಕವಾಗಿ ಮಳೆಯಾಗುತ್ತಿದ್ದ ಹಿನ್ನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಆದರೆ ಈ ಬಾರಿ ಮಳೆಯಾಗದೆ ಹಳ್ಳಕೊಳ್ಳಗಳು ಸಂಪೂರ್ಣ ಬತ್ತಿಹೋಗಿವೆ. ಇತ್ತ ಮೇವಿಲ್ಲದೆ ಜಾನುವಾರುಗಳು ಪರಿತಪಿಸುತ್ತಿವೆ. ಇದರ ಪರಿಣಾಮವಾಗಿ ಈಗಾಗಲೇ ಕೆಲ ರೈತರು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಹಾಗಾಗಿ ಉಳಿದಿರುವ ಜಾನುವಾರುಗಳಿಗೆ ಮೇವು ಹಾಗೂ ನೀರು ಪೂರೈಸುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದ್ದು, ಸಂಕಷ್ಟ ಎದುರಿಸುವಂತಾಗಿದೆ.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ತಾಲೂಕಿನ ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ, ದಂಟಳ್ಳಿ ಇತರ ಗ್ರಾಮಗಳಲ್ಲಿ ಜಿಲ್ಲಾಡಳಿತ ಜಾನುವಾರುಗಳಿಗೆ ಗೋ ಶಾಲೆ ತೆರೆದು ಮೇವು ಹಾಗೂ ಕುಡಿಯುವ ನೀರು ಒದಗಿಸುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗೋವುಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಜಾನುವಾರುಗಳಿಗೆ ಮೇವು ಹಾಗೂ ನೀರನ್ನು ಒದಗಿಸುವಂತೆ ಹಳೆಯೂರು ಗ್ರಾಮದ ಮಾದಪ್ಪ ಒತ್ತಾಯಿಸಿದ್ದಾರೆ.