ಜಿಲ್ಲೆ

ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರಿಗೆ ಸೌಲಭ್ಯ ನೀಡಿ

ಮೈಸೂರು: ಸೇನೆಯಲ್ಲಿ ಇದ್ದಾಗ ದೇಶಕ್ಕಾಗಿ ಹೋರಾಟ ಮಾಡಿದ ಸೈನಿಕರಿಗೆ ನಿವೃತ್ತಿ ಬಳಿಕ ಸಮರ್ಪಕ ಸೌಲಭ್ಯ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನೌಕಾಪಡೆಯ ನಿವೃತ್ತ ಅಧಿಕಾರಿ ರವಿ ಗಾಯಕ್ವಾಡ್ ಆಗ್ರಹಿಸಿದರು.
ನೇವಲ್ ವೆಟರನ್ಸ್ ಅಸೋಸಿಯೇಷನ್‌ನಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ನೌಕಾ (ನೇವಿ) ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೇವೆಯಲ್ಲಿ ಇದ್ದಾಗ ಪ್ರಾಣವನ್ನು ಪಣಕ್ಕಿಟ್ಟು ದೇಶ ಸೇವೆ ಮಾಡುತ್ತೇವೆ. ನಿವೃತ್ತಿ ಬಳಿಕ ಮನೆಗೆ ಮರಳಿದಾಗ ನಮಗೆ ಹಲವು ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಇವುಗಳನ್ನು ಬಗೆಹರಿಸಿಕೊಳ್ಳಲು ನಾನಾ ಕಚೇರಿಗಳನ್ನು ಅಲೆಯಬೇಕಾಗುತ್ತದೆ. ಆದ್ದರಿಂದ ಇಂತಹ ನಿವೃತ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪರಸ್ಪರ ಎಲ್ಲರ ಸಹಕಾರ ಮುಖ್ಯ ಎಂದರು.
ಪ್ರತಿವರ್ಷ ದೆಹಲಿಯಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ಸಮ್ಮುಖದಲ್ಲಿ ನೇವಿ ದಿನಾಚರಣೆ ಮಾಡಲಾಗುತ್ತದೆ. ಈ ಬಾರಿ ದಕ್ಷಿಣ ಮಹಾರಾಷ್ಟ್ರದ ಸಿಂಧೂ ದುರ್ಗದಲ್ಲಿ ನಡೆಸುತ್ತಿರುವುದು ವಿಶೇಷವಾಗಿದೆ. ಭಾರತೀಯ ಸೇನೆಯ ಎಲ್ಲ ತುಕಡಿಗಳು ಭಾಗವಹಿಸಲಿದ್ದು, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸುವರು. ಎರಡು ವರ್ಷಗಳಿಂದ ಮೈಸೂರಿನಲ್ಲಿಯೂ ನೇವಿ ದಿನಾಚರಣೆ ಆಯೋಜಿಸುತ್ತಿದ್ದು, ಇದು ಮೂರನೇ ಬಾರಿಯ ದಿನಾಚರಣೆ ಎಂದು ಹೇಳಿದರು.
ನೇವಲ್ ವೆಟರನ್ಸ್ ಅಸೋಸಿಯೇಷನ್ ಅಧ್ಯಕ್ಷ ಗಜಾನನ ಭಟ್, ಉಪಾಧ್ಯಕ್ಷ ಕೆ.ಪಿ.ಉತ್ತಪ್ಪ, ಪ್ರಧಾನ ಕಾರ್ಯದರ್ಶಿ ರಾಜೇಶ್, ಬಿಬಿಎಂಪಿ ನಿವೃತ್ತ ಆಯುಕ್ತ ಮಂದಣ್ಣ, ಪುತ್ತೂರು ಉಪ ಆಯುಕ್ತ ಗಿರೀಶ್ ನಂದನ್, ಸೈಯದ್ ಹೈದರಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಘಟಕದ ಸೋಮಣ್ಣ ಇತರರು ಇದ್ದರು.