ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರು ಸುಲಭವಾಗಿ ತೆರಳಲು ಅಗತ್ಯ ಮೂಲಸೌಲಭ್ಯವನ್ನು ಎಲ್ಲೆಡೆ ಅಳವಡಿಸಬೇಕಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ನಗರ ಜಿಲ್ಲಾಡಳಿತ, ನಗರ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಡಿಸಿ ಕಚೇರಿ ಆವರಣದಲ್ಲಿ ‘ಸುಗಮ್ಯ ಭಾರತ ಅಭಿಯಾನ’ ಯೋಜನೆಯಡಿ ಸುಗಮ್ಯ ಯಾತ್ರೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರವು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ -2016ನ್ನು ಜಾರಿಗೊಳಿಸಿದೆ. ಇದರನ್ವಯ ಸರ್ಕಾರಿ ಕಚೇರಿಗಳು, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರಿಗೆ ಅಗತ್ಯ ಸೌಲಭ್ಯ ಒದಗಿಸಿ ಅಡೆ-ತಡೆರಹಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ರಾಂಪ್, ಶೌಚಾಲಯ ಮತ್ತು ಸೈನೇಜ್ ಫಲಕ ಒಳಗೊಂಡಂತೆ ಅಂಗವಿಕಲ ಸ್ನೇಹಿ ವಾತಾವರಣ ಮೂಡಿಸಲು ಮಾಹಿತಿ ಕ್ರೋಡೀಕರಿಸಲು ಕೇಂದ್ರ ಸರ್ಕಾರವು ರಾಜ್ಯದ ಎನ್‌ಜಿಒ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರನ್ವಯ ಸೌಲಭ್ಯ ಒದಗಿಸಿರುವ ಬಗ್ಗೆ ‘ಎಸ್ ಟು ಆಕ್ಸಿಸ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಸಾಮಾನ್ಯ ವ್ಯಕ್ತಿಯು ಸಹ ತನ್ನ ಮೊಬೈಲ್ ನಿಂದ ಈ ಆ್ಯಪ್ ಅನ್ನು ಸುಲಭವಾಗಿ ಬಳಸಲು ಸಾಧ್ಯವಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರ ಇಲಾಖೆಯ ಜಂಟಿ ನಿರ್ದೇಶಕ ಎಸ್.ನಟರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದಶಕ ಡಾ. ಎಸ್.ಸಿದ್ದರಾಮಣ್ಣ, ಹಿರಿಯ ಅಧಿಕಾರಿಗಳಾದ ಕೆ.ಕೃಷ್ಣಮೂರ್ತಿ, ರಾಜು ಚಂದ್ರಶೇಖರ್ ಭಾಗವಹಿಸಿದ್ದರು.