ಜಿಲ್ಲೆ

ಬೆಳೆ ಉಳಿಸಿಕೊಳ್ಳಲು ವಿದ್ಯುತ್​ ನೀಡಿ

ಸಮರ್ಪಕ ವಿದ್ಯುತ್​ ಪೂರೈಕೆಗೆ ಆಗ್ರಹಿಸಿ ಗುಡಿಬಂಡೆ ಪಟ್ಟಣದ ಬೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. ರೈತ ಮುಖಂಡರಾದ ಜಯರಾಮರೆಡ್ಡಿ, ಶಿವರಾಮ್​, ರಾಮರೆಡ್ಡಿ, ಮಂಜುನಾಥ್​, ಸೋಮು ಸೇರಿ ರೈತ ಸಂಘ ಹಾಗೂ ಸಿಪಿಎಂ ಮುಖಂಡರು ಇದ್ದರು.

ಚಿಕ್ಕಬಳ್ಳಾಪುರ ಡೆಸ್ಕ್

ಬೆಸ್ಕಾಂ ಕಚೇರಿ ಎದುರು ರೈತರು ಸಮರ್ಪಕ ವಿದ್ಯುತ್​ಗೆ ಆಗ್ರಹಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಬೆಳೆ ಉಳಿಸಿಕೊಳ್ಳಲು ಸಮರ್ಪಕ ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಶುಕ್ರವಾರ ನೂರಾರು ರೈತರು ಪ್ರತಿಭಟನೆ ನಡೆಸಿದರು.
ಯಾವುದೇ ನದಿ ಮೂಲಗಳು ಇಲ್ಲದೇ ನೀರಾವರಿಗೆ ಸಮಸ್ಯೆ ಆಗುತ್ತಿದೆ. ತಾಲೂಕಿನಾದ್ಯಂತ ಬರ ಆವರಿಸಿದ್ದು, ಬೆಳೆದ ಬೆಳೆ ಒಣಗುತ್ತಿದೆ. ಅಳಿದುಳಿದ ಬೆಳೆ ಕಾಪಾಡಿಕೊಳ್ಳಲು ಕೊಳವೆ ಬಾವಿಗಳ ಮೂಲಕ ನೀರು ಹರಿಸುವುದು ಅನಿವಾರ್ಯವಾಗಿದೆ. ಆದರೆ, ಬೆಸ್ಕಾಂ ಸಮರ್ಪಕವಾಗಿ ವಿದ್ಯುತ್​ ಪೂರೈಕೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥ್​ ಮಾತನಾಡಿ, ತಾಲೂಕಿನಾದ್ಯಂತ ಮಳೆಯ ಅಭಾವದಿಂದ ಶೇ.50 ಮಾತ್ರ ಬಿತ್ತನೆ ಮಾಡಲಾಗಿದೆ. ಮಳೆ ಬೀಳದ ಕಾರಣ ಬಿತ್ತನೆ ಮಾಡಿದ ಬೆಳೆ ಸಹ ಒಣಗುತ್ತಿದೆ. ಕೆಲ ರೈತರು ಕೊಳವೆಬಾವಿಗಳ ಮೂಲಕ ನೀರನ್ನು ಹಾಯಿಸಲು ಮುಂದಾಗಿದ್ದಾರೆ. ಆದರೆ ಬೆಸ್ಕಾಂ ನೀಡುತ್ತಿರುವ ಅಸಮರ್ಪಕ ವಿದ್ಯುತ್​ನಿಂದಾಗಿ ನೀರು ಹರಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಮುಖಂಡ ಉಪ್ಪಾರಹಳ್ಳಿ ಶ್ರೀನಿವಾಸ್​ ಮಾತನಾಡಿ, ತಾಲೂಕಿನಲ್ಲಿ ರೈತರ ಬದುಕು ಅಯೋಮಯವಾಗಿದೆ. ಅಧಿಕಾರಿಗಳ ರ್ನಿಲಕ್ಷ$್ಯ ಹಾಗೂ ಬೇಜವಾಬ್ದಾರಿಯಿಂದಾಗಿ ರೈತರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಇದೀಗ ಪಂಪ್​ ಸೆಟ್​ಗಳಿಗೆ ಸಮರ್ಪಕ ವಿದ್ಯುತ್​ ಪೂರೈಕೆ ಮಾಡದೇ ರೈತರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದ್ದಾರೆ. ಕ್ರಷರ್​ಗಳಿಗೆ ದಿನದ 24 ಗಂಟೆ ವಿದ್ಯುತ್​ ನೀಡುವ ಬೆಸ್ಕಾಂಗೆ ರೈತರ ಪಂಪ್​ಸೆಟ್​ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್​ ನೀಡಲು ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮನವಿ ಸ್ವೀಕರಿಸಿದ ಬೆಸ್ಕಾಂ ಅಧಿಕಾರಿ ಬಾಬು ಮಾತನಾಡಿ, ವಿದ್ಯುತ್​ ಪೂರೈಕೆಯಲ್ಲಿನ ಸಮಸ್ಯೆಯಿಂದಾಗಿ ಅಡಚಣೆಯಾಗಿತ್ತು. ಶೀಘ್ರದಲ್ಲೇ ರೈತರಿಗೆ ಸಮರ್ಪಕ ವಿದ್ಯುತ್​ ಪೂರೈಕೆಗೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಬೆಸ್ಕಾಂ ಕಚೇರಿಗೆ ಬೀಗದ ಎಚ್ಚರಿಕೆ:
ಗುಡಿಬಂಡೆಯನ್ನು ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರಿಸದೆ ಸರ್ಕಾರ ರೈತರಿಗೆ ಮೋಸ ಮಾಡಿದೆ. ಇದರ ಜತೆಗೆ ಇದೀಗ ವಿದ್ಯುತ್​ ಪೂರೈಕೆ ಮಾಡುವಲ್ಲಿ ಸಹ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಗೆ ದಿನಕ್ಕೆ 7 ಗಂಟೆ ವಿದ್ಯುತ್​ ಪೂರೈಕೆ ಮಾಡುವುದಾಗಿ ಹೇಳಿದ್ದ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಇದರಿಂದಾಗಿ ರೈತರು ಮತ್ತಷ್ಟ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸದೆ ಇದ್ದರೆ ಬೆಸ್ಕಾಂ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.