ಸೋಮವಾರಪೇಟೆ : ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳಲ್ಲಿ ಪರಿಭಾವಿತ (ಡಿಮ್ಡ್) ಅರಣ್ಯ ಪ್ರದೇಶದ ಸರ್ವೇ ಬಗ್ಗೆ ಕೃಷಿಕರಿಗೆ ಮನವರಿಕೆ ಮಾಡಿಕೊಡಬೇಕೆಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಆಗ್ರಹಿಸಿದ್ದಾರೆ.
ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಸೋಮವಾರ ತೆರಳಿದ ಸಮಿತಿಯ ಪದಾಧಿಕಾರಿಗಳು ಎಸಿಎಫ್ ಎ.ಎ.ಗೋಪಾಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ದಶಕಗಳ ಹಿಂದೆ ಅವೈಜ್ಞಾನಿಕವಾಗಿ ಕಂದಾಯ ಇಲಾಖೆ ಗುರುತಿಸಿರುವ ಪರಿಭಾವಿತ (ಡಿಮ್ಡ್) ಅರಣ್ಯ ಪ್ರದೇಶವನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಸರ್ವೇ ಮಾಡಲು ಮುಂದಾಗಿದ್ದು, ಕೃಷಿಕರು ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಎರಡು ಇಲಾಖೆಯ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ರೈತರಿಗೆ ಮಾಹಿತಿ ನೀಡಿ ಸರ್ವೇ ಮಾಡಬೇಕೆಂದು ಮನವಿ ಮಾಡಿದರು.
ಇಲಾಖೆಯಿಂದ ಸರ್ವೇ ನಡೆಸುವಾಗ ಜನಪ್ರತಿನಿಧಿಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತರಬೇಕು. ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ತಂದು ಆಕ್ಷೇಪಗಳನ್ನು ಪಡೆದು ಸರ್ಕಾರ ಮತ್ತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರೆ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕುವುದು ತಪ್ಪುತ್ತದೆ ಎಂದು ಹೇಳಿದರು.
ಜಿಲ್ಲೆಯ ಬಹುತೇಕ ಗ್ರಾಮಗಳ ಕೃಷಿ ಭೂಮಿಯ ಸೆಟಲ್ಮೆಂಟ್ ಸರ್ವೇ ಆಗಿಲ್ಲ. ಗ್ರಾಮಗಳ ಗಡಿ ಗುರುತು ಮಾಡದಿರುವುದರಿಂದ ಗ್ರಾಮ ನಕ್ಷೆಗಳಲ್ಲಿ ಕೆಲವು ಜಮೀನುಗಳ ನಕ್ಷೆಗಳು ವ್ಯತ್ಯಾಸವಾಗಿದೆ. ಹಾರಂಗಿ ಮುಳುಗಡೆ ಪ್ರದೇಶದ ಬದಲಿ ಜಾಗದ ಸರ್ವೇ ನಂಬರ್‌ಗಳಲ್ಲೂ ವ್ಯತ್ಯಾಸವಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ತಪ್ಪಿನಿಂದ ರೈತಾಪಿ ವರ್ಗ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರ ರೈತರ ಪರವಾಗಿ ನಿಲ್ಲಬೇಕು ಎಂದು ಹೇಳಿದರು. ಗಿಡಮರಗಳನ್ನು ನೆಡುವ ಮೂಲಕ ನೂರಾರು ವರ್ಷಗಳಿಂದ ರೈತರು ಅರಣ್ಯ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ರೈತರಿಗೆ ಅನ್ಯಾಯವಾಗದಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಸರ್ಕಾರದ ಆದೇಶದಂತೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಸೇರಿ ಸಮಿತಿ ರಚನೆ ಮಾಡಿ ಸಭೆ ನಡೆಸಲಾಗುತ್ತಿದೆ. ಮುಂದಿನ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ನಂತರ ಸಮಿತಿ ಸದಸ್ಯರು ತಹಸೀಲ್ದಾರ್ ಮತ್ತು ಎಡಿಎಲ್‌ಆರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಯಿತು. ಸಮಿತಿಯ ಉಪಾಧ್ಯಕ್ಷ ಕೆ.ಎನ್.ದೀಪಕ್, ಕಾರ್ಯದರ್ಶಿ ಆದರ್ಶ್, ಪದಾಧಿಕಾರಿಗಳಾದ ತ್ರಿಶೂಲ್, ಶಿವಕುಮಾರ್, ಶ್ರೀನಿಧಿ ಮತ್ತು ಸಮಿತಿ ಸದಸ್ಯರು ಇದ್ದರು.