ರಾಯಚೂರು ಇತ್ತಿಚ್ಚಿಗೆ ಸುರಿದ ಮಳೆ ಹಾಗೂ ಬಿರುಗಾಳಿಗೆ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯ ೨.೫೦ ಲಕ್ಷ ಎಕರೆ ಭತ್ತದ ಬೆಳೆಗೆ ಹಾನಿಯಾಗಿದ್ದು ಕೂಡಲೇ ಸರ್ಕಾರ ಪರಿಹಾರ ನೀಡಲು ಸರ್ವೆ ಕಾರ್ಯ ನಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸಿಂಧನೂರು,ಮಸ್ಕಿ, ಲಿಂಗಸೂಗೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಭತ್ತದ ಬೆಳೆ ನಾಶವಾಗಿದೆ ಎಂದರು.
ರೈತ ಕಷ್ಟಪಟ್ಟು ಬೆಳೆದ ಬೆಳೆ ಕಟಾವಿಗೆ ಬಂದ ಸಮಯದಲ್ಲಿ ಹವಾಮಾನ ವೈಪರಿತ್ಯ ಕಾರಣದಿಂದ ನೆಲಕಚ್ಚಿ ಸಂಪೂರ್ಣವಾಗಿ ಹಾಳಾಗಿದೆ. ಈ ಬಗ್ಗೆ ಜಿಲ್ಲಾಽಕಾರಿಗಳನ್ನು ಈಗಾಗಲೇ ಭೇಟಿ ಮಾಡಿ ಸಮಸ್ಯೆಯ ಕುರಿತು ಗಮನಕ್ಕೆ ತಂದಿದ್ದು, ಜಿಲ್ಲಾಽಕಾರಿಗಳು ಸರ್ವೆ ಕಾರ್ಯಮಾಡಿಸುವುದಾಗಿದೆ.
ಆದರೆ ಸರ್ವೆ ಮಾಡುವ ವಿಎಗಳು ಪ್ರಾಮಾಣಿಕವಾಗಿ ಸರ್ವೆ ಮಾಡುವುದಿಲ್ಲ ಎಂದು ಆರೋಪಿಸಿದರು, ಸರ್ಕಾರದಿಂದ ಬೆಳೆ ಹಾನಿಗೆ ಶೇ.೩೩ ರಷ್ಟು ಹಾನಿಯಾದರೆ ಮಾತ್ರ ಪರಿಹಾರವೆಂದು ಮಾನದಂಡವನ್ನು ಅನುಸರಿಸುತ್ತದೆ ಇದು ಸರಿಯಾದ ಕ್ರಮವಲ್ಲ. ಕೂಡಲೇ ಪರಿಹಾರ ಮಾನದಂಡವನ್ನು ಪರಿಷ್ಕರಿಸಿ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆಯೋ ಅಷ್ಟೂ ಪರಿಹಾರವನ್ನು ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೂದಯ್ಯ ಸ್ವಾಮಿ, ಅಮರೇಶ ಆಲ್ದಾಳ, ಲಿಂಗಾರೆಡ್ಡಿ, ನರಸಿಂಹಲು ಇದ್ದರು.