ಮುಂಡಗೋಡ: ನಿರಂತರ ಮಳೆಗೆ ಭತ್ತ, ಗೋವಿನಜೋಳ ಸೇರಿ ಇತರೆ ಬೆಳೆಗಳು ಹಾಳಾಗೀಡಾಗಿದ್ದು, ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಶಂಕರ ಗೌಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಶಿವಾಜಿ ವೃತ್ತದ ಬಳಿ ಮಾನವ ಸರಪಳಿ ನಿರ್ವಿುಸಿ ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಬೆಳೆ ಪರಿಹಾರ ನೀಡಬೇಕು. ಕಳೆದ ವರ್ಷ ಮಳೆ ಕಡಿಮೆಯಾಗಿ ಬರಗಾಲ ಉಂಟಾಗಿತ್ತು. ಈ ವರ್ಷ ಹೆಚ್ಚಿನ ಪ್ರಮಾಣದ ಮಳೆ ಸುರಿದು ಭತ್ತ, ಗೋವಿನಜೋಳ, ಅಡಕೆ, ಶುಂಠಿ ಸೇರಿ ಇತರೆ ಬೆಳೆಗಳು ಹಾನಿಯಾಗಿವೆ. ಇದರಿಂದ ರೈತರು ಅಪಾರ ಪ್ರಮಾಣದ ಹಾನಿ ಅನುಭವಿಸಿದ್ದಾರೆ. ಸಾಲ ಮಾಡಿ ಬೆಳೆ ಬೆಳೆದ ಪೈರು ಕಟಾವು ಹಂತಕ್ಕೆ ಬಂದಾಗ ಮಳೆಯಿಂದಾಗಿ ಹಾನಿಗೀಡಾಗಿವೆ. ಕೂಡಲೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕಿಸಾನ್ ಸಂಘದ ಮಲ್ಲನಗೌಡ ಪಾಟೀಲ, ಪುಟ್ಟಸ್ವಾಮಿ, ಮಾದವ ಹೆಗಡೆ, ಗುರುನಾಥ ಗೌಡ್ರ, ಗೋಪಾಲಕೃಷ್ಣ ಭಟ್, ಸಂಗಮೇಶ ಬಿದರಿ, ಸಿದ್ದಪ್ಪ ಹಡಪದ, ಶ್ರೀಧರ ಡೋರಿ, ಬಸವರಾಜ ಪಾಟೀಲ, ನಾಗನಗೌಡ ಶಿವನಗೌಡ್ರ, ಬಸಯ್ಯ ಹಿರೇಮಠ,ನಾರಾಯಣ ರುಕ್ಮಾಯವರ, ವಿನಯಗೌಡ ಪಾಟೀಲ, ಇತರರಿದ್ದರು.