ಸಿಂಧನೂರು: ತಾಲೂಕಿನ ಬೂತಲದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ, ಅಸ್ವಸ್ಥರ ಯೋಗ ಕ್ಷೇಮ ವಿಚಾರಿಸಿದರು.
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಾದರ್ಲಿ ಮಾತನಾಡಿ, ಏಕಾಏಕಿ ಇಷ್ಟೊಂದು ಪ್ರಮಾಣದಲ್ಲಿ ವಾಂತಿ-ಭೇದಿ ಪ್ರಕರಣಗಳು ಕಂಡುಬರಲು ಕಾರಣವೇನು ಎಂಬುದರ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು. ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮವಹಿಸಬೇಕು. ಸ್ವಚ್ಛತೆಗೆ ಗ್ರಾಪಂ ಮುಂದಾಗಬೇಕೆಂದು ತಿಳಿಸಿದರು. ಅಗತ್ಯ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಜನರು ಆತಂಕಪಡುವ ಅಗತ್ಯವಿಲ್ಲ. ಎಲ್ಲ ರೀತಿಯ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.
ಟಿಎಚ್‌ಒ ಡಾ.ಅಯ್ಯನಗೌಡ ಮಾತನಾಡಿ, ವಾಂತಿ-ಭೇದಿ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಂಡಿರುವುದಾಗಿ ತಿಳಿಸಿದರು. ತಹಸೀಲ್ದಾರ್ ಅರುಣ್ ದೇಸಾಯಿ, ತಾಪಂ ಇಒ ಚಂದ್ರಶೇಖರ, ಜಿಪಂ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ವಿಜಯಲಕ್ಷ್ಮೀ, ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಇತರರಿದ್ದರು.