ಜಿಲ್ಲೆ

ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಸರ್ಕಾರಿ ಬಸ್‌ಗಳ ಸೌಲಭ್ಯಗಳಿಂದ ವಂಚಿತರಾದ ಜನರಿಗೆ ಸರ್ಕಾರಿ ಬಸ್ ಸೇವೆ ಸಿಗಬೇಕು ಎಂದು ಹೋರಾಟ ನಡೆಯುತ್ತಿದ್ದರೂ ಜಿಲ್ಲಾ ಸಾರಿಗೆ ಪ್ರಾಧಿಕಾರ ಕಾಳಜಿ ವಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸಾರಿಗೆ ಪ್ರಾಧಿಕಾರದ ಅಧಿಕಾರಿ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ಆರಂಭಿಸಲು ಮುಂದಾಗಬೇಕು ಎಂದು ಸಿಐಟಿಯು ನಾಯಕ ಸುರೇಶ್ ಕಲ್ಲಾಗರ ಹೇಳಿದರು.

ಕಟ್ಟಡ ಕಾರ್ಮಿಕರ ಮಹಿಳಾ ಉಪಸಮಿತಿ ಮತ್ತು ಜನವಾದಿ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ಒದಗಿಸುವಂತೆ ಆಗ್ರಹಿಸಿ ಶಿರೂರು ಗ್ರಾ.ಪಂ. ಮುಂದೆ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಮಾತನಾಡಿ ಬೇಡಿಕೆ ಈಡೇರದಿದ್ದಲ್ಲಿ ಸಾರಿಗೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಿರೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಪಿಡಿಒ, ಪಂಚಾಯಿತಿ ಮೂಲಕ ನಿರ್ಣಯ ಅಂಗೀಕರಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ಕಾರ್ಯದರ್ಶಿ ನಾಗರತ್ನಾ ನಾಡ, ಕಟ್ಟಡ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್, ಸಹ ಪದಾಧಿಕಾರಿಗಳಾದ ಶ್ರೀಧರ ದೇವಾಡಿಗ ಉಪ್ಪುಂದ, ಗೊಪಾಲಕೃಷ್ಣ, ರೋನಿ ನಜರೆತ್, ಸಿಡಬ್ಲುೃಎಫ್‌ಸಿ ರಾಜ್ಯ ಸಮಿತಿ ಸದಸ್ಯ ರಮೇಶ್ ಗುಲ್ವಾಡಿ, ಪದ್ಮಾವತಿ ಶಿರೂರು, ಶಾಂತಾ ಉಪ್ಪುಂದ ಉಪಸ್ಥಿತರಿದ್ದರು.

ಎಲ್ಲೆಲ್ಲಿಗೆ ಬೇಡಿಕೆ ಇದೆ?

ಸೂಕ್ತ ಬಸ್ ಸೌಲಭ್ಯಗಳಿಲ್ಲದೆ ನಿತ್ಯವೂ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಬೈಂದೂರು, ಸೋಮೇಶ್ವರ, ದೊಂಬೆ, ಕರಾವಳಿ ಮಾರ್ಗವಾಗಿ ಶಿರೂರಿಗೆ ಸರ್ಕಾರಿ ಬಸ್ ಸಂಚಾರ ನಿತ್ಯವೂ ನಡೆಯಬೇಕು ಎಂದು ಸ್ಥಳೀಯರು ಮನವಿ ಮೂಲಕ ಆಗ್ರಹಿಸಿದ್ದಾರೆ.