ಕೊಳ್ಳೇಗಾಲ: ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಬಸ್ ಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ತಾಲೂಕಿನ ಮುಳ್ಳೂರು, ಪಾಳ್ಯ ಸೇರಿದಂತೆ ಇತರ ಕಡೆಗಳಿಗೆ ಬಸ್ ಸೇವೆ ಅಗತ್ಯವಿದೆ. ಶಾಲಾ-ಕಾಲೇಜು ಸಮಯಕ್ಕೆ ಬಸ್ ಸಿಗದೆ ಮಕ್ಕಳು ಪರದಾಡುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಈ ಸಮಸ್ಯೆ ಇದೆ. ಆದ್ದರಿಂದ ಕೂಡಲೇ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಪೋ ಮ್ಯಾನೇಜರ್ ಶಂಕರ್ ಮಾತನಾಡಿ, ಇರುವ ಬಸ್ ಸೌಲಭ್ಯವನ್ನು ಬಳಸಿಕೊಂಡು ಸೇವೆ ನೀಡಲಾಗುತ್ತಿದೆ. ರೈತರ ಒತ್ತಾಯದಂತೆ ಯಾವ ಊರುಗಳಿಗೆ ಬಸ್ ಅಗತ್ಯವಿದೆಯೋ ಪರಿಶೀಲಿಸಿ ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಸ್ವಾಮಿ, ಉಪಾಧ್ಯಕ್ಷ ಸಿದ್ದರಾಜು ನಾಯಕ, ರಘು, ಬಿ. ಕೊಂಗರಹಳ್ಳಿ ಸಿದ್ದಪ್ಪ, ಅಂಬಲೆ ಶಿವಕುಮಾರ್, ದಿಲೀಪ್, ಮಾದಪ್ಪ ಬಿ.ವೈ.ಲಿಂಗರಾಜು ಮತ್ತಿತರರಿದ್ದರು.