ನೀಲಗುಂದ ಶ್ರೀ ಶಿವಶರಣ ಶಿವಪ್ಪಯ್ಯ ಪ್ರೌಢಶಾಲೆಯಲ್ಲಿ ಸಮರ್ಪಕ ಶಿಕ್ಷಕರನ್ನು ಒದಗಿಸಬೇಕೆಂದು ಆಗ್ರಹಿಸಿ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಪ್ರೌಢಶಾಲೆಗೆ ಸಮರ್ಪಕ ಶಿಕ್ಷಕರನ್ನು ಒದಗಿಸಿ

Vijayapura - Desk - Gurappa Lokuri

ಕುಳಗೇರಿ ಕ್ರಾಸ್: ಸಮರ್ಪಕ ಶಿಕ್ಷಕರನ್ನು ಒದಗಿಸಬೇಕೆಂದು ಆಗ್ರಹಿಸಿ ನಿಲಗುಂದ ಶ್ರೀ ಶಿವಶರಣ ಶಿವಪ್ಪಯ್ಯ ಪ್ರೌಢಶಾಲೆ ನೂರಾರು ವಿದ್ಯಾರ್ಥಿಗಳು ಶನಿವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಶಾಲೆಯಿಂದ ನೀಲಗುಂದ ಗ್ರಾಮದ ಬಸ್ ನಿಲ್ದಾಣ ಎದುರಿನ ಮುಖ್ಯರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಶಾಲೆ ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು.

ನಮ್ಮ ಪ್ರೌಢಶಾಲೆಯಲ್ಲಿ ಹಲವಾರು ವರ್ಷಗಳಿಂದ ಸರಿಯಾಗಿ ಶಿಕ್ಷಕರು ಇಲ್ಲದಂತಾಗಿದೆ. ಸದ್ಯ ನಾವು ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೂ ವಿಷಯ ಶಿಕ್ಷಕರಿಲ್ಲದೆ ಹೇಗೆ ಅಭ್ಯಾಸ ಮಾಡಬೇಕು. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಅಲವತ್ತುಕೊಂಡರು.

ಪ್ರೌಢಶಾಲೆಯಲ್ಲಿ 145 ಜನ ವಿದ್ಯಾರ್ಥಿಗಳಿದ್ದು ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ನಿತ್ಯ ಎರಡು ಕ್ಲಾಸ್‌ಗಳು ಮಾತ್ರ ನಡೆಯುತ್ತಿವೆ. ವರ್ಷ ಮುಗಿಯುತ್ತ ಬಂದರೂ ಸರಣಿ ಪರೀಕ್ಷೆಗಳನ್ನು ನಡೆಸಿಲ್ಲ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಈ ಕುರಿತು ಹಲವು ಬಾರಿ ಶಿಕ್ಷಣ ಇಲಾಖೆ ಎಲ್ಲ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಜತೆಗೆ ಹಲವಾರು ಪಾಲಕರು ಇದ್ದರು.

ನನ್ನ ಮಗನಿಗೆ ಓದಲು ಸಹ ಬರುತ್ತಿಲ್ಲ. ಹೀಗಾದರೆ ನಮ್ಮ ಮಕ್ಕಳ ಭವಿಷ್ಯ ಏನಾಗುತ್ತದೆ ? ನಮ್ಮ ಮಕ್ಕಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೇ ಅವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ ವಿದ್ಯಾರ್ಥಿ ಪಾಲಕರೊಬ್ಬರು ಆರೋಪಿಸಿದರು.