ಪಾಂಡವಪುರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅರ್ಜಿ ನಮೂನೆಯನ್ನು ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಅವರು ಬಿಡಗಡೆ ಮಾಡಿದರು. ಸತೀಶ್, ಮೋಹನ್, ಧರ್ಮಶೆಟ್ಟಿ, ಸಿ.ನಂದಕುಮಾರ್, ನಿಂಗೇಗೌಡ ಇತರರು ಇದ್ದರು. 
ಜಿಲ್ಲೆ

ಸಮೀಕ್ಷೆಯಲ್ಲಿ ಸಮರ್ಪಕ ಮಾಹಿತಿ ನೀಡಿ

ಪಾಂಡವಪುರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆ.22ರಿಂದ ಅ.7ರವರೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಸ್ಪಂದಿಸಿ ಸಮರ್ಪಕ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪೂರ್ವಭಾವಿಯಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳ, ಗ್ರಾಮಲೆಕ್ಕಿಗರ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ 50,099 ಕುಟುಂಬಗಳಿದ್ದು, ಎಲ್ಲ ಮನೆಗಳಿಗೂ ಭೇಟಿ ಕೊಟ್ಟು ಸಮೀಕ್ಷೆ ನಡೆಸಲಾಗುವುದು. ಮನೆಗಳ ಬಳಿ ಸಮೀಕ್ಷೆ ನಡೆಸಲು ಶಿಕ್ಷಕರು, ಸಿಬ್ಬಂದಿ ಬಂದಾಗ ಸಾರ್ವಜನಿಕರು ತಮ್ಮ ಕುಟುಂಬದ ಸಂಪೂರ್ಣ ವಿವರ ನೀಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕಾಗಿಯೇ 406 ಮಂದಿ ಶಿಕ್ಷಕರು, 10 ಮಂದಿ ಮಾಸ್ಟರ್ ತರಬೇತಿ ಹೊಂದಿರುವ ಹಾಗೂ 20 ಮಂದಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಸೆ.13 ರಿಂದ 19ರವರೆಗೆ ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆ ನಮೂನೆ ಅರ್ಜಿಯನ್ನು ಆಯಾ ಕುಟುಂಬಗಳಿಗೆ ತಲುಪಿಸಲಾಗುವುದು. ಕುಟುಂಬದಲ್ಲಿರುವ ವಿದ್ಯಾವಂತರು ಓದಿ ಕುಟುಂಬದ ಎಲ್ಲ ಸದಸ್ಯರಿಗೆ ತಾವು ನೀಡಬೇಕಾಗಿರುವ ಮಾಹಿತಿ ಬಗ್ಗೆ ಅರಿವು ಮೂಡಿಸಬೇಕು. ಆಧಾರ್ ಸಂಖ್ಯೆ ಕಡ್ಡಾಯವಾಗಿ ನಮೋದಿಸಬೇಕಾಗಿರುವುದರಿಂದ ಆಧಾರ್ ಇಲ್ಲದವರು ತ್ವರಿತವಾಗಿ ಆಧಾರ್ ನೋಂದಣಿ ಮಾಡಿಸಿಕೊಳ್ಳಬೇಕು. ಆಧಾರ್‌ಗೆ ಮೊಬೈಲ್ ಸಂಖ್ಯೆ ಸೇರಿಸಿಕೊಳ್ಳಬೇಕು. ಅರ್ಜಿಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಎಲ್ಲ ಪ್ರಶ್ನೆಗಳಿಗೂ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ತಡವಾಗಿ ಬಂದ ಸಿಬ್ಬಂದಿಗೆ ತರಾಟೆ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪೂರ್ವಭಾವಿ ಸಭೆಗೆ ತಡವಾಗಿ ಆಗಮಿಸಿದ ಸಿಬ್ಬಂದಿಗೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ತರಾಟೆಗೆ ತೆಗೆದುಕೊಂಡರು.

ಯಾವುದೇ ಸಭೆ ನಡೆದರೂ ಅಧಿಕಾರಿಗಳು, ಸಿಬ್ಬಂದಿ ನಿಗದಿತ ಸಮಯಕ್ಕೆ ಆಗಮಿಸಬೇಕು. ಯಾವುದೇ ಕಾರಣಕ್ಕೂ ತಡವಾಗಿ ಬರಬಾರದು. ತಡವಾಗಿ ಬರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್, ಉಪತಹಸೀಲ್ದಾರ್ ಮೋಹನ್, ಬಿಇಒ ಧರ್ಮಶೆಟ್ಟಿ, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಕಣ್ಯಾಧಿಕಾರಿ ಸಿ.ನಂದಕುಮಾರ್, ವಿಸ್ತರ್ಣಾಧಿಕಾರಿ ನಿಂಗೇಗೌಡ ಇತರರು ಇದ್ದರು.