ಲೋಕಾಪುರ: ಸಮರ್ಪಕ ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿ ಪಟ್ಟಣದ ವಾರ್ಡ್ ನಂ.9ರ ಭೋವಿ ಗಲ್ಲಿ ನಿವಾಸಿಗಳು ಲೋಕಾಪುರ ಪಟ್ಟಣ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.
ಭೋವಿ ಗಲ್ಲಿ ಕಳೆದ ಐದಾರು ದಿನಗಳಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಇತ್ತೀಚೆಗೆ ಪಪಂ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರ ಗಮನಕ್ಕೆ ತಂದಿದ್ದರಿಂದ ಅಧಿಕಾರಿಗಳು ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರಾದರೂ ಇಲ್ಲಿಯವರೆಗೂ ನೀರೇ ಬಿಟ್ಟಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆಗೊಮೆ, ಈಗೊಮ್ಮೆ ಬಿಡುವ ಕೆರೆಯ ಕಲುಷಿತ ನೀರಿನಿಂದ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಯಾಗುತ್ತಿದೆ. ಕೂಡಲೇ ಪಪಂ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಒಂದು ಗಂಟೆಗಳವರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೂ ಯಾವುದೇ ಅಧಿಕಾರಿಗಳು ಕಚೇರಿಗೆ ಆಗಮಿಸದಿರುವುದು ಪ್ರತಿಭಟನಾಕಾರ ಆಕ್ರೋಶಕ್ಕೆ ಕಾರಣವಾಯಿತು.
ಇಂಜಿನಿಯರ್ ಪ್ರಶಾಂತ ವಿರುದ್ಧ ಆಕ್ರೋಶ: ಪಪಂ ಇಂಜಿನಿಯರ್ ಪ್ರಶಾಂತ ಪಾಟೀಲ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಲವಾರು ಬಾರಿ ನೀರಿನ ಸಮಸ್ಯೆ ಕುರಿತು ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಮೇಲಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಭರವಸೆ ನೀಡಿದ ಮುಖ್ಯಾಧಿಕಾರಿ: ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಎರಡ್ಮೂರು ದಿನಗಳಲ್ಲಿ ಬೋರ್‌ವೆಲ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಅಲ್ಲದೆ ವಾಟರ್‌ಮನ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಮಖಂಡಿ ಎಸಿ ಶ್ವೇತಾ ಬೀಡಿಕರ ಸ್ಥಳಕ್ಕೆ ಆಗಮಿಸಿ ವಾರ್ಡ್ ನಿವಾಸಿಗಳ ಸಮಸ್ಯೆ ಆಲಿಸಿ, ಸ್ಥಳದಲ್ಲಿದ್ದ ತಹಸೀಲ್ದಾರ್ ಹಾಗೂ ಪಪಂ ಅಧಿಕಾರಿಗಳಿಗೆ ಎರಡು ದಿನದಲ್ಲಿ ಕೊಳವೆ ಬಾವಿ ಕೊರೆದು ನೀರಿನ ಸಮಸ್ಯೆ ನೀಗಿಸಬೇಕೆಂದು ಆದೇಶಿಸಿದರು. ಅಲ್ಲದೆ, ಕರೆಯಿಂದ ನೀರು ಪೂರೈಸುವ ಮಾರ್ಗದಲ್ಲಿ ಅನಧಿಕೃತ ನಳ ಜೋಡಣೆ ಮಾಡಿಕೊಂಡಿದ್ದನ್ನು ಕಟ್ ಮಾಡಲು ಸೂಚಿಸಿದರು.
ವಾರ್ಡ್ ನಿವಾಸಿಗಳಾದ ಗುಲಾಬಸಾಬ ಅತ್ತಾರ, ಶೌಕತ್ತ ಕರ್ನಾಚಿ, ಸಾಧಿಕ ರಾಮದುರ್ಗ, ಹುಸೇನಬೇಗ ಜಮಾದಾರ, ಬಂದೆನಮಾಜ್ ತೋರಗಲ್ಲ, ಶಿವು ಭೋವಿ, ಇಮ್ರಾನ್ ರಾಮದುರ್ಗ, ಆನಂದ ನಾವಿ, ವಿಠ್ಠಲ ಕೌಜಲಗಿ, ಮೌಸೀನ್ ರಾಮದುರ್ಗ, ಅಸ್ಲಂ ಕರ್ನಾಚಿ, ರಾಜಾಹ್ಮದ್ ರಾಮದುರ್ಗ, ಅತಾಉಲ್ಲಾ ಅತ್ತಾರ, ಶಬ್ಬೀರ್ ತೋರಗಲ್ಲ ಹಾಗೂ ಪಟ್ಟಣದ ವಾರ್ಡ್ ನಂ. 9 ಭೋವಿ ಗಲ್ಲಿ ನಿವಾಸಿಗಳು, ಮಹಿಳೆಯರು ಇದ್ದರು.