ಶಿಗ್ಗಾಂವಿ: ಹೆಣ್ಣು ಮಕ್ಕಳ ಉಚಿತ ಪ್ರಯಾಣದಿಂದ ಬಸ್‌ಗಳು ತುಂಬುತ್ತಿವೆ. ಇದರಿಂದ ಶಾಲೆಗಳ ಪ್ರಾರಂಭವಾಗಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಎಲ್ಲ ಮಾರ್ಗ, ನಿಗದಿತ ಸಮಯದಲ್ಲಿ ಬಸ್‌ಗಳನ್ನು ಓಡಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ಮಾರ್ಗಕ್ಕೆ ಒಂದೇ ಬಸ್ ಬಿಡುವುದರಿಂದ ವಿದ್ಯಾರ್ಥಿಗಳು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸುತ್ತಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಸೋಮವಾರ ಒಂದು ಅನಾಹುತ ಆಗಿದೆ. ಒಂದೇ ಬಸ್ ಓಡಿಸುವುದರಿಂದ ಈ ತರಹದ ಅವಘಡಗಳು ನಡೆಯುತ್ತವೆ.
ಸರ್ಕಾರ ಒಂದು ಯೋಜನೆ ಜಾರಿ ಮುನ್ನ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಒಳ್ಳೆಯ ಕಾರ್ಯಕ್ರಮ ನೀಡುವಾಗ ಸಮರ್ಪಕವಾಗಿ ತಯಾರಿ ಮಾಡಿಕೊಳ್ಳಬೇಕು. ಈ ಗುರುತರ ಜವಾಬ್ದಾರಿ ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಮೇಲಿದೆ ಒಂದು ವಾರದಲ್ಲಿ ಈ ಸಮಸ್ಯೆಗಳನ್ನು ಅವರು ಸರಿ ಮಾಡಬೇಕು ಎಂಬ ಆಗ್ರಹಿಸಿದರು.
ನಮ್ಮ ಆಡಳಿತ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ಕೆಇಆರ್‌ಸಿ ಮಾರ್ಚ್‌ನಲ್ಲಿ ವಿದ್ಯುತ್ ದರದ ಹೆಚ್ಚಳದ ಪ್ರಸ್ತಾವನೆ ಕೊಟ್ಟರೂ ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ನಾವು ದರ ಹೆಚ್ಚಳದ ಕುರಿತು ಯಾವುದೇ ಆದೇಶ ಮಾಡಿಲ್ಲ. ಈ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಹೆಚ್ಚಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಆರ್ಥಿಕವಾಗಿ ತೊಂದರೆಯಾಗುವ ಜತೆಗೆ ಬರುವ ದಿನಗಳಲ್ಲಿ ಇಂಧನ ಕ್ಷೇತ್ರ ಬಹಳ ಸಂಕಷ್ಟಕ್ಕೆ ಈಡಾಗಲಿದೆ ಎಂದರು.
ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಗೆ ಹಣ ಕೊಡಬೇಕು. ಒಂದು ವರ್ಷ ಬಿಟ್ಟು ಸಹಾಯಧನ ಕೊಟ್ಟರೆ ಆಗಲ್ಲ. ಮುಂಗಡವಾಗಿ ಕೊಡಬೇಕು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಮಕ್ಕಳಿಗೆ ವಿಶೇಷ ಸ್ಕೂಲ್ ಬಸ್ ಕೊಡಬೇಕು. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಿಗೆ ಸರಿಯಾಗಿ ಹಣ ಕೊಟ್ಟು ನಿರ್ವಹಿಸದೇ ಇದ್ದರೆ ಸಾರಿಗೆ ಸ್ಥಗಿತ ಆಗೋದು, ವಿದ್ಯುತ್ ಶಕ್ತಿ ನಿಲ್ಲೋದು ಗ್ಯಾರಂಟಿ ಆಗುತ್ತೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.