ಕಿಕ್ಕೇರಿ : ನೂರಾರು ಶಿಲ್ಪಿಗಳು ವಿಶ್ವಕರ್ಮ ಸಮುದಾಯದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಗೋವರ್ಧನಚಾರ್ ತಿಳಿಸಿದರು.
ಇಲ್ಲಿನ ವಿಶ್ವಕರ್ಮ ಮಹಾಸಭಾ ಸಮಾಜದಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವಕರ್ಮ ಕಾಯಕ ಸಮಾಜದಲ್ಲಿ 103 ವರ್ಗಗಳಿದ್ದು, ಇದರಲ್ಲಿ 98 ಸಮುದಾಯಗಳು ನಿಷ್ಕ್ರಿಯವಾಗಿದೆ. ಹುಟ್ಟಿನಿಂದ ಸಾಯುವವರಿಗೆ ಎಲ್ಲ ಕೆಲಸಕ್ಕೆ ಪಂಚಕರ್ಮ ವೃತ್ತಿದಾರರಾದ ವಿಶ್ವಕರ್ಮರು ಎಲ್ಲರಿಗೂ ಬೇಕಿದೆ. ಆದರೆ ಸವಲತ್ತು ಮಾತ್ರ ಸಿಗುತ್ತಿಲ್ಲ. ಶಿಲ್ಪದ ಮೂಲಕ ದೇವರನ್ನು ಸೃಷ್ಟಿಸಿ ಜೀವ ತುಂಬುವ ಸಮಾಜ ರಾಜ್ಯದಲ್ಲಿ 5 ಲಕ್ಷ ಜನಸಂಖ್ಯೆ ಹೊಂದಿದೆ. ಪಂಚಕರ್ಮಿಗಳಾದ ತಾವು ನಡುರಸ್ತೆಯಲ್ಲಿ ನಿಂತಿದ್ದೇವೆ. ಕಾಯಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕಿದೆ ಎಂದರು.
ಪಂಚಕರ್ಮಿಗಳಾದ ವಿಶ್ವಕರ್ಮರು ಚಿನ್ನ, ಬೆಳ್ಳಿ, ಮರಗೆಲಸ, ತಾಮ್ರ, ಕಲ್ಲಿನ ಶಿಲ್ಪಕಲೆ ಕೆಲಸ ಎನ್ನದೆ ಎಲ್ಲ ಕಲಾತ್ಮಕ ಕುಸುರಿ ಕೆಲಸ ಮಾಡುತ್ತದೆ. ಈ ಸಮುದಾಯದಲ್ಲಿ ಹುಟ್ಟುತ್ತಲೆ ಪ್ರತಿಭೆ ಬಂದಿದೆ. ಗೃಹಪ್ರವೇಶ, ದೇವಾಲಯ, ಮತ್ತಿತರ ಶುಭ ಕಾರ್ಯಗಳಿಗೆ ಶಕ್ತಿ ನೀಡುವ ದೇವರನ್ನು ನಿರ್ಮಿಸಿಕೊಡುವ ಪವಿತ್ರ ಸಮುದಾಯ ತಮ್ಮದಾಗಿರುವುದು ಹೆಮ್ಮೆಯಾದರೂ ಬದುಕು ಮಾತ್ರ ಅತಂತ್ರವಾಗಿದೆ ಎಂದರು.
ಕಸುಬು ನಂಬಿಕೊಂಡು ಬದುಕುವುದು ಕಷ್ಟಕರವಾಗಿದೆ. ಜಗತ್ತಿನ ಮೂಲ ಸೃಷ್ಟಿಕರ್ತ ವಿಶ್ವಕರ್ಮ. 20 ಸಾವಿರ ವರ್ಷಗಳ ಹಿಂದೆಯೇ ಗಾಯಿತ್ರಿ ಮಂತ್ರವನ್ನು ಬರೆದ ವರ್ಗ ತಮ್ಮದಾಗಿದೆ. ರಾಜಕೀಯ ಸ್ಥಾನಮಾನ ಮರೀಚಿಕೆಯಾಗಿ ಭರವಸೆಯಲ್ಲಿಯೇ ಉಳಿದಿದೆ. ವಿಶ್ವಕರ್ಮರು ಒಂದಾಗಿ ಸಂಘಟಿತರಾದಲ್ಲಿ ಸಮುದಾಯ ಪ್ರಗತಿ ಹೊಂದಲು ಸಾಧ್ಯವಾಗಲಿದೆ. ಹೋಬಳಿಯಲ್ಲಿ ಜನಾಂಗದ ಸಮುದಾಯಭವನ ಅವಶ್ಯವಾಗಿದೆ ಎಂದು ಮನವಿ ಮಾಡಿದರು.
ಶಿಕ್ಷಕ ದಯಾನಂದ್ ಮಾತನಾಡಿ, ಬ್ರಹ್ಮನ ಪುತ್ರ ವಿಶ್ವಕರ್ಮ ವಿಶ್ವದ ಮೊದಲ ಇಂಜಿನಿಯರ್, ಸತ್ಯ ಯುಗದಲ್ಲಿ ಸ್ವರ್ಗಲೋಕ, ತ್ರೇತಾ ಯುಗದಲ್ಲಿ ಲಂಕೆ, ದ್ವಾಪರ ಯುಗದಲ್ಲಿ ದ್ವಾರಕೆ, ಹಸ್ತಿನಾಪುರ, ಕಲಿಯುಗದಲ್ಲಿ ಇಂದ್ರಪ್ರಸ್ಥ ನಿರ್ಮಿಸಿದ ದೇವಸ್ವರೂಪಿ ಆಗಿದ್ದು ಸಮುದಾಯದವರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ವಿನಂತಿಸಿದರು. ಮುಖಂಡರಾದ ರಜಿನಿಕಾಂತ್, ಪ್ರಸನ್ನ, ವೆಂಕಟೇಶಚಾರ್, ಮಹೇಶ್, ಯೋಗೇಶ್, ಶಿಕ್ಷಕ ದಯಾನಂದ್ ಮತ್ತಿತರರಿದ್ದರು.