ತ್ಯಾಗರ್ತಿ: ಸಾಗರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಒತ್ತಾಯಿಸಿ ಮಳ್ಳ, ಕಾಗೋಡುದಿಂಬ, ಕೊಪ್ಪ ಗ್ರಾಮಸ್ಥರು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಮಂಗಳವಾರ ಸಭೆ ಸೇರಿದ್ದ ಗ್ರಾಮಸ್ಥರು, ಕಂದಾಯ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಹೋರಾಡಲು ರೂಪುರೇಷೆ ಸಿದ್ಧಪಡಿಸಿದರು.
ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಮಳ್ಳ ಗ್ರಾಮದ ಸರ್ವೆ ನಂ.95ರಲ್ಲಿ ಸಾಗರ ನಿವಾಸಿಯೊಬ್ಬರು 3 ಎಕರೆ ಜಮೀನು ಖರೀದಿಸಿ ಪಕ್ಕದ ಸರ್ಕಾರಿ ಜಾಗ ಮತ್ತು ಕೆರೆ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿದ್ದಾರೆ. ಮರಗಳನ್ನು ಕಡಿದು ಗೋಡೌನ್ ನಿರ್ವಿುಸಲು ಅಡಿಪಾಯ ಹಾಕಿ ಕಾಮಗಾರಿ ಆರಂಭಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸರ್ಕಾರಿ ಜಮೀನು ಒತ್ತುವರಿಗೆ ಹಿರೇಬಿಲಗುಂಜಿ ಗ್ರಾಮ ಸಹಾಯಕರು ಹಣ ಪಡೆದಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು, ಗ್ರಾಮ ಸಹಾಯಕರು ಜಮೀನು ವ್ಯವಹಾರದಲ್ಲಿ ಕಮಿಷನ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿರುವುದೇ ಸರ್ಕಾರಿ ಜಾಗ ತೆರವುಗೊಳಿಸದಿರುವುದಕ್ಕೆ ಕಾರಣ ಎಂದು ಆರೋಪಿಸಿದರು.
ಜಮೀನು ಒತ್ತುವರಿ ತೆರವಿಗೆ ತಹಸೀಲ್ದಾರ್ಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಅವರೂ ಯಾವುದೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಕೊಪ್ಪ ತಿಳಿಸಿದರು.
ಪ್ರಮುಖರಾದ ದೂಗೂರು ಬಸಪ್ಪ, ಸುಬ್ಬಪ್ಪ, ನಾಗರಾಜ, ಕಾಗೋಡು ಕುಮಾರ, ಶೇಖರಪ್ಪ, ಸತೀಶ ಇತರರಿದ್ದರು.
ನಮ್ಮ ತಂದೆ ಇಲ್ಲಿ ಜಮೀನು ಖರೀದಿಸಿದ್ದಾರೆ. ಜಮೀನಿನ ಪಕ್ಕ ಇರುವ ಜಾಗಕ್ಕೆ ಬೇಲಿ ಹಾಕಿಸಿಕೊಡುವುದಾಗಿ ಗ್ರಾಮ ಸಹಾಯಕರು ನಮ್ಮ ತಂದೆಯಿಂದ 75 ಸಾವಿರ ರೂ. ಪಡೆದಿದ್ದರು. ನಾವು ಒತ್ತುವರಿ ಮಾಡಿಲ್ಲ. ಶುಂಠಿ ಸ್ವಚ್ಛಗೊಳಿಸುವ ಯಂತ್ರ ಅಳವಡಿಸಲು ಅಡಿಪಾಯ ಹಾಕಿದ್ದೇವೆ. ಗ್ರಾಮಸ್ಥರೊಂದಿಗೆ ಸೌಹಾರ್ದಯುತವಾಗಿ ವಿವಾದ ಬಗೆಹರಿಸಿಕೊಳ್ಳುತ್ತೇವೆ.
| ಫಯಾಜ್, ಮುಜೀಬ್ ಅವರ ಪುತ್ರ