ಜಿಲ್ಲೆ

ಜಾತಿ ಜನಗಣತಿ ವರದಿ ಕೈಬಿಡದಿದ್ದರೆ ಹೋರಾಟ: ಮೈಸೂರು, ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಎಚ್ಚರಿಕೆ

ಮೈಸೂರು: ಜಾತಿ ಗಣತಿ ಮಾಡಿರುವ ಕಾಂತರಾಜ ಆಯೋಗದ ವರದಿ ಹತ್ತು ವರ್ಷ ಹಳೆಯದಾಗಿದ್ದು, ಸಮೀಕ್ಷೆಯೂ ವೈಜ್ಞಾನಿಕವಾಗಿಲ್ಲ. ಹಾಗಾಗಿ ಈ ವರದಿ ತಿರಸ್ಕರಿಸದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮೈಸೂರು, ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಸರ್ಕಾರವನ್ನು ಎಚ್ಚರಿಸಿದೆ.

ಹತ್ತು ವರ್ಷಗಳ ಹಿಂದೆ ರಾಜ್ಯದ ಜನಸಂಖ್ಯೆ 4.49 ಕೋಟಿಗೂ ಅಧಿಕವಿದೆ. ಇದರಲ್ಲಿ ಒಕ್ಕಲಿಗರ ಸಂಖ್ಯೆ 55 ಲಕ್ಷಕ್ಕೂ ಹೆಚ್ಚು ಇತ್ತು ಎಂದು ತಿಳಿಸಲಾಗಿದೆ. ಆದರೆ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ಒಂದು ಕೋಟಿಗೂ ಹೆಚ್ಚು ಇದ್ದಾರೆ. ಆದರೆ ಕಾಂತರಾಜು ಆಯೋಗ ಕೇವಲ 61 ಲಕ್ಷ ಒಕ್ಕಲಿಗರು ಇದ್ದಾರೆ ಎಂದು ತಿಳಿಸಿದೆ. ಇದು ಒಕ್ಕಲಿಗ ಸಮುದಾಯವನ್ನು ಒಡೆಯುವ ಹಾಗೂ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ತಳ್ಳುವ ಹುನ್ನಾರವಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಇ.ಚೇತನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಮೀಕ್ಷೆ ವೇಳೆ ಮನೆ ಮನೆಗೆ ಭೇಟಿ ನೀಡದೆ ಗಣತಿ ಮಾಡಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್‌ಕಾರ್ಡ್‌ಗಳಲ್ಲಿ ಜಾತಿ ನಮೂನೆ ಅಥವಾ ಜಾತಿ ಸೂಚಕ ಇಲ್ಲ. ಶಾಲಾ ವರ್ಗಾವಣೆ ಪತ್ರ ಹಾಗೂ ಜಾತಿ ಪ್ರಮಾಣ ಪತ್ರಗಳಲ್ಲಿ ಮಾತ್ರ ಇದೆ. ಹೀಗಿರುವಾಗ ರಾಜ್ಯದಲ್ಲಿರುವ ಎಲ್ಲ ಒಕ್ಕಲಿಗ ಒಳಪಂಡಗಳ ಪೈಕಿ ಎಷ್ಟು ಜನರಿಗೆ ಟಿಸಿ ಇದೆ, ಎಷ್ಟು ಜನ ವರ್ಗಾವಣೆ ಪ್ರಮಾಣ ಪತ್ರ ಹೊಂದಿದ್ದಾರೆ ಎನ್ನುವುದನ್ನು ಯಾವ ಮಾನದಂಡದ ಆಧಾರದ ಮೇಲೆ ಖಾತ್ರಿ ಮಾಡಿಕೊಂಡರು ಎಂಬುದು ತಿಳಿಯದಾಗಿದೆ ಎಂದು ಲೇವಡಿ ಮಾಡಿದರು.

ಈ ವರದಿಯ ಉದ್ದೇಶ ಕೇವಲ ಒಕ್ಕಲಿಗ ಸಮುದಾಯವನ್ನು ಒಡೆಯುವ ಯತ್ನವಾಗಿದೆ. ಪ್ರಾತಿನಿಧ್ಯವನ್ನು ಎಲ್ಲ ಮೂಲಗಳಿಂದ ತೆಗೆದು ಹಾಕುವ ಸಂಚು ನಡೆಸಿದ್ದಾರೆ. ಹೀಗಾಗಿ ಒಕ್ಕಲಿಗ ಸಮುದಾಯದ ಜನಪ್ರತಿನಿಧಿಗಳು ಇದನ್ನು ವಿರೋಧಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ಮಂಜೇಗೌಡ, ಸಿ.ಮರಿಸ್ವಾಮಿ, ಎನ್.ಪ್ರಕಾಶ್, ಜಿ.ಕುಮಾರ್‌ಗೌಡ, ಕಿರಣ್‌ಗೌಡ, ಪ್ರಸನ್ನ ಎನ್.ಗೌಡ, ಸುಶೀಲಾ ನಂಜಪ್ಪ, ಕೆ.ಪಿ.ನಾಗಣ್ಣ, ಎಂ.ಕೆ.ಮಿರ್ಲೆ ಶ್ರೀನಿವಾಸ್‌ಗೌಡ ಇತರರಿದ್ದರು.