ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ಕಿಶೋರ ರಾಕೇಶ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದಲ್ಲಿ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ ಸದಸ್ಯರು ಶುಕ್ರವಾರ ರಸ್ತೆ ಸಂಚಾರ ತಡೆ ಪ್ರತಿಭಟನೆ ನಡೆಸಿದರು.
ಇಲ್ಲಿಯ ಸ್ಟೇಶನ್ ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ವಕೀಲ ರಾಕೇಶನಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ. ಧಿಕ್ಕಾರ, ಧಿಕ್ಕಾರ ರಾಕೇಶನಿಗೆ ಧಿಕ್ಕಾರ ಎಂಬ ಘೊಷಣೆಗಳನ್ನು ಕೂಗಿದರು. ಆತನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಮತಾ ಸೇನಾ ಕರ್ನಾಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ಕಲಾಪ ನಡೆಸುವ ಸಮಯದಲ್ಲಿ ಅಕ್ರಮ ಪ್ರವೇಶ ಮಾಡಿ ಅಪಮಾನ ಮಾಡಿದ ಜಾತಿವಾದಿ ಕಿಶೋರ ರಾಕೇಶ ನಡೆ ಖಂಡನೀಯ. ಇದು ಸಂವಿಧಾನ ಹಾಗೂ ಸುಪ್ರೀಂ ಕೋರ್ಟ್ಗೆ ಅಪಮಾನ ಮಾಡಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರು ಈ ಕೃತ್ಯವನ್ನು ಖಂಡಿಸಿದ ಬಳಿಕ ಪ್ರಧಾನಿ ಮೋದಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಕರೆ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ತಪ್ಪಿತಸ್ಥನಿಗೆ ಶಿಕ್ಷೆ ನೀಡಲು ಸೂಚಿಸದಿರುವುದು ನೋಡಿದರೆ ಜನರಲ್ಲಿ ಅನುಮಾನ ಮೂಡುತ್ತಿದೆ ಎಂದರು.
ಗುರುನಾಥ ಚಲವಾದಿ, ರೇವಣ್ಣ ಸಿದ್ದಪ್ಪ ಹೊಸಮನಿ, ಶಿವಾನಂದ ಮುತ್ತಣ್ಣವರ, ]ೕನಿವಾಸ ಬಿ., ರಾಜು ಬೋಸದ, ಲೋಹಿತ್ ಗಾಮನಗಟ್ಟಿ, ರವಿ, ವಿನಾಯಕ, ನಾಗಪ್ಪ ಸೇರಿದಂತೆ ಅನೇಕರಿದ್ದರು.