ಜಿಲ್ಲೆ

ನಗರ ಬಿಜೆಪಿಯಿಂದ ವಿವಿಧೆಡೆ ಪ್ರತಿಭಟನೆ

ಆರ್.ಕೃಷ್ಣ

ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವ ಷಡ್ಯಂತ್ರ ನಡೆಯುತ್ತಿದ್ದು, ಷಡ್ಯಂತ್ರ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿಯಿಂದ ನಗರದ ವಿವಿಧೆಡೆ ಪ್ರತಿಭಟನೆ ನಡೆಯಿತು.

ಕೃಷ್ಣರಾಜ ಕ್ಷೇತ್ರದ ಅಧಕ್ಷ ಗೋಪಾಲ್ ರಾಜೇ ಅರಸ್ ನೇತೃತ್ವದಲ್ಲಿ ಕುವೆಂಪುನಗರದ ಕಾಂಪ್ಲೆಕ್ಸ್‌ನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಧರ್ಮಾಧಿಕಾರಿ ಆಡಳಿತದಲ್ಲಿರುವ ಧರ್ಮಸ್ಥಳ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಬಹುಸಂಖ್ಯಾತ ಹಿಂದುಗಳ ಧಾರ್ಮಿಕ ಕೇಂದ್ರವನ್ನು ದುರ್ಬಲಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ಸರ್ಕಾರದ ಇಂತಹ ಕಳ್ಳಾಟಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ತಕ್ಷಣ ಇಂತಹ ಕೃತ್ಯ ನಿಲ್ಲಿಸಬೇಕು, ಅಲ್ಲದೇ ಧರ್ಮಸ್ಥಳದ ಬಗ್ಗೆ ಅಪಮಾನ ಮಾಡಿ ಹೇಳಿಕೆ ನೀಡುತ್ತಾ ಷಡ್ಯಂತ್ರ ಮಾಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಅದಕ್ಕಾಗಿ ಸಾಂಕೇತಿಕ ಹೋರಾಟ ಮಾಡಿದ್ದು, ಸರ್ಕಾರ ನಿರ್ಲಕ್ಷ ವಹಿಸಿದರೆ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು. ಜತೆಗೆ ಧರ್ಮಸ್ಥಳಕ್ಕೆ ರ‌್ಯಾಲಿ ನಡೆಸಲಾಗುವುದು ಎಂದು ಹೇಳಿದರು.

ಅನಾಮಿಕ ದೂರುದಾರನ ಮಾತಿನಿಂತೆ 14 ದಿನ ಎಲ್ಲವನ್ನು ಅಗೆದು ಹಾಳು ಮಾಡಿದ್ದಾರೆ. ಇಷ್ಟು ಅಗೆದರೂ ಸರ್ಕಾರಕ್ಕೆ ಸಿಕ್ಕಿದ್ದು ಬರೀ ಮಣ್ಣು. ಇನ್ನು 100 ಕಡೆ ಅಗೆದರೂ ಬರೀ ಮಣ್ಣೆ ಸಿಗುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಎಸ್‌ಐಟಿ ರದ್ದು ಮಾಡಬೇಕು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯುಟ್ಯೂಬರ್‌ಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಶಿವಕುಮಾರ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಹರೀಶ್, ಕೇಬಲ್ ಮಹೇಶ್, ಗಿರಿಧರ್, ಗೋಕುಲ್ ಗೋವರ್ಧನ್, ವಿಶ್ವ, ಈಶ್ವರ್, ಬಿಲ್ಲಯ್ಯ, ಮನೋಜ್, ಓಂ ಶ್ರೀನಿವಾಸ್, ನಿಶಾಂತ್, ಜಯರಾಂ, ಜೈ ಶಂಕರ್, ವಿನಯ್, ರಾಜೇಶ್, ಜೋಗಿ ಮಂಜು, ಹೇಮಂತ, ವಿಶ್ವ, ಮಂಜುನಾಥ್, ಹರೀಶ್, ಅಂಕಿತ್, ರವಿ, ಸರ್ವಮಂಗಳ, ಕಾವೇರಿ, ರೂಪ, ರೇಖಾ, ಲತಾ, ಜ್ಯೋತಿ, ನಂದಾಸಿಂಗ್, ಸುಮಿತ್ರಾ, ಜಯಂತಿ ಇತರರಿದ್ದರು.