ಬೀದಿ ನಾಯಿಗಳ ಕಡಿತದಿಂದ ಮೃತಪಟ್ಟ ಹಸುವನ್ನು ಗಾಡಿಯೊಳಗೆ ಹಾಕಿಕೊಂಡು ಪುರಸಭೆಗೆ ಆಗಮಿಸಿದ ಗೋ-ಭಕ್ತರು ಪುರಸಭೆ ಮ್ಯಾನೇಜರ್ ಎಸ್.ಎನ್.ಪಾಟೀಲ ಅವರಿಗೆ ಮಹಾಲಿಂಗೇಶ್ವರ ಶ್ರೀಗಳ ಮನವಿ ನೀಡಿದರು. ಈಶ್ವರ ಮಠದ, ಶ್ರೀಶೈಲ ಮಠದ ಇದ್ದರು. 
ಜಿಲ್ಲೆ

ಮೃತ ಹಸುವಿನೊಂದಿಗೆ ಪ್ರತಿಭಟನೆ

ದತ್ತಾತ್ರೇಯ ಪಿ ಕುಲಕರ್ಣಿ

ಮಹಾಲಿಂಗಪುರ: ಸ್ಥಳೀಯ ಮಹಾಲಿಂಗೇಶ್ವರ ಗೋಶಾಲೆಗೆ ನುಗ್ಗಿ ಹಸುಗಳನ್ನು ಕಡಿದು ತಿನ್ನುತ್ತಿರುವ ಬೀದಿ ನಾಯಿಗಳಿಂದ ಹಸುಗಳು ಮರಣ ಹೊಂದುತ್ತಿವೆ. ಕೂಡಲೇ ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕು ಎಂದು ಮಹಾಲಿಂಗೇಶ್ವರ ಮಠದ ಪೀಠಾಧಿಪತಿ, ಮಹಾಲಿಂಗೇಶ್ವರ ಗೋಶಾಲೆ ಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಮಹಾಲಿಂಗೇಶ್ವರ ರಾಜೇಂದ್ರ ಸ್ವಾಮಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಭಕ್ತರ ಮೂಲಕ ಬುಧವಾರ ಪುರಸಭೆಗೆ ಮನವಿ ಸಲ್ಲಿಸಿರುವ ಅವರು, ಸಾಕಷ್ಟು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಪುರಸಭೆಯ ನಿಷ್ಕಾಳಜಿಯಿಂದ ಗೋಶಾಲೆಯ ಗೋವುಗಳು ಮರಣ ಹೊಂದುತ್ತಿವೆಯೆಂದು ಪುರಸಭೆ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮುಂದಾದರೂ ನಿಷ್ಕಾಳಜಿ ತೋರದೆ ಗೋಶಾಲೆಯ ಸುತ್ತಮುತ್ತ ಇರುವ ಬೀದಿ ನಾಯಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಿರ್ವಹಣೆ ಮಾಡಬೇಕು. ಇಲ್ಲದೆ ಹೋದರೆ ಮುಂದೆ ಇಂತಹ ಪ್ರಕರಣಗಳು ನಡೆದರೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈಶ್ವರ ಮಠದ, ಶ್ರೀಶೈಲ ಮಠದ, ಸಿದ್ದಯ್ಯ ಮಠಪತಿ, ಅಭಿ ಲಮಾಣಿ, ಸಂಜು ಅಂಗಡಿ, ಅನಿಲ ಕಿರಿಕಿರಿ, ಮಂಜು ಗೊಂಬಿ, ಶಿವಾ ಟಿರಕಿ, ಬಸವರಾಜ ದಲಾಲ, ಬಸವರಾಜ ಗಿರಿಸಾಗರ ಇತರರಿದ್ದರು.

ಆಕಳು ಸಾವು

ನಾಯಿ ಕಡಿತದಿಂದ ಹಸು ಮರಣಹೊಂದಿದ ವಿಷಯ ತಿಳಿದ ನೂರಾರು ಗೋ ಭಕ್ತರು ಬುಧವಾರ ಬೆಳಗ್ಗೆ ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಜಮಾಯಿಸಿ ಗಾಡಿಯಲ್ಲಿ ಮೃತ ಹಸುವನ್ನು ಹೇರಿಕೊಂಡು ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ‘ಗೋಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತ ಪುರಸಭೆಗೆ ಆಗಮಿಸಿ ಆಕ್ರೋಶ ಹೊರಹಾಕಿದರು. ಪುರಸಭೆ ಮ್ಯಾನೇಜರ್ ಎಸ್.ಎನ್.ಪಾಟೀಲ ಮನವಿ ಸ್ವೀಕರಿಸಿ ಮಾತನಾಡಿ, ಬೀದಿ ನಾಯಿಗಳ ಹಾವಳಿ ತಪ್ಪಿಸಲು ಯೋಗ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನಂತರ ಶ್ರೀರಾಮ ಸೇನೆ ಮತ್ತು ಇನ್ನಿತರ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಮೃತ ಹಸುವಿಗೆ ಪೂಜೆ ಸಲ್ಲಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.