ಜಿಲ್ಲೆ

ರದ್ದಾದ ಯೋಜನೆ ಈಗ ಹೇಗೆ ಮತ್ತೆ ಪ್ರಾರಂಭವಾಗಿದೆ - ಶ್ರೀಧರ ಶೆಟ್ಟಿ ಬೈಲುಗುತ್ತು

Mangaluru - Nishantha Narayana

ಪುತ್ತೂರು: ಉಭಯ ಜಿಲ್ಲೆಯಲ್ಲಿ ಖಾಸಗೀ ಕಂಪನಿಯ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಉಡುಪಿ, ಕಾರ್ಕಳ, ನಿಡ್ಡೋಡಿ, ಕುಪ್ಪೆಪದವು, ವಿಟ್ಲ ಭಾಗದಲ್ಲಿ ವಿದ್ಯುತ್ ಮಾರ್ಗದ ವಿಚಾರದಲ್ಲಿ ಆಗಮಿಸುವವರನ್ನು ಓಡಿಸುವ ಕಾರ್ಯ ನಡೆಯುತ್ತಿದೆ. ಬಂಟ್ವಾಳದ ರೈತರು ಯೋಜನೇ ಸಮರ್ಪಕವಾಗಿಲ್ಲ ಎಂದು ನ್ಯಾಯಾಲಯಕ್ಕೆ ಹೋಗಿದ್ದು, ಅಲ್ಲಿ ಆಗಿರುವ ಸ್ಟೇ ವೆಕೇಟ್ ಪ್ರತಿಯನ್ನು ಹಿಡಿದುಕೊಂಡು ಬಂದು ಪ್ರಕರಣ ಕೈಬಿಟ್ಟು ಹೋಗಿದೆ ಎಂದು ಸುಳ್ಳುಹೇಳಿ ಜನರನ್ನು ಮೋಸ ಮಾಡಲಾಗುತ್ತಿದೆ. ಕಂಪನಿಯವರು ರೈತರಿಗೆ ಆಮಿಷಗಳನ್ನು ತೋರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇವೆ ದ. ಕ. ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.

ಜಿಲ್ಲಾಧಿಕಾರಿ ಸರ್ಕಾರಿ ಜಾಗದಲ್ಲಿ ಟವರ್ ನಿರ್ಮಾಣ ಮಾಡಿ ಎಂದು ಕುಪ್ಪೆಪದವಿಗೆ ನೀಡಿದ ಆದೇಶವನ್ನು ಪುಣಚ, ವಿಟ್ಲದಲ್ಲಿ ತಂದು ಆದೇಶವಾಗಿದೆ ತೋರಿಸಿಸುವ ಕಾರ್ಯವಾಗುತ್ತಿದೆ. ಸರ್ಕಾರಿ ಜಾಗದಲ್ಲಿ ಟವರ್ ನಿರ್ಮಾಣ ಮಾಡಿದರೂ, ಲೈನ್ ಹೋಗುವುದು ರೈತರ ವರ್ಗ ಜಾಗದಲ್ಲಿ. ಇದನ್ನು ಸರಿಯಾಗಿ ಗಮನಿಸದೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದು ಸರಿಯಲ್ಲ. ರೈತರ ತೆರಿಗೆ ಹಣದಲ್ಲೇ ವೇತನ ಪಡೆಯುತ್ತಿರುವ ಜಿಲ್ಲಾಧಿಕಾರಿಗಳು ರೈತರನ್ನು ಕರೆದು ಮಾತನಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಶಾಸಕರು ಭರವಸೆಯನ್ನು ನೀಡಿದ್ದರು. ರೈತರ ಬಗ್ಗೆ ಕಾಳಜಿ ಎಂದು ಹೇಳುವ ಜನಪ್ರತಿನಿಧಿಗಳು ಈಗ ಕಂಪನಿಯ ಜತೆಗೆ ಶಾಮೀಲಾಗಿದ್ದಾರಾ ಎಂಬ ಅನುಮಾನ ಕಾಡುತ್ತಿದೆ ಎಂದು ವಿಟ್ಲದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಹಿಂದೆ ಶಾಸಕರೊಬ್ಬರು ಯೋಜನೆಯನ್ನು ರದ್ದು ಮಾಡಿಸಿದ್ದಾಗಿ ಹೇಳಿಕೆ ನೀಡಿದ್ದಲ್ಲದೆ ರೈತರು ಯಾವುದೇ ಚಿಂತೆ ಮಾಡುವುದು ಬೇಡವೆಂದು ಹೇಳಿದ್ದರು. ರದ್ದಾದ ಯೋಜನೆ ಈಗ ಹೇಗೆ ಮತ್ತೆ ಪ್ರಾರಂಭವಾಗಿದೆ. ಬಂಟ್ವಾಳ ಹಾಗೂ ಪುತ್ತೂರು ಭಾಗದ ಜನಪ್ರತಿನಿಧಿಗಳು ರೈತರಿಗೆ ಅನ್ಯಾಯವಾಗಿ ಯೋಜನೆ ಜಾರಿಗೆ ಮಾಡಲು ಬಿಡುವುದಿಲ್ಲ ಎಂದು ಹೇಳಿ ಈಗ ಯಾವ ಕಡೆ ಇದ್ದಾರೆಂದು ತಿಳಿಯುತ್ತಿಲ್ಲ. ಯೋಜನೆ ಎಲ್ಲಿಯದ್ದಾದರೂ, ಅನ್ನ ನೀಡುವುದು ಇಲ್ಲಿನ ರೈತರಲ್ಲವಾ? ಎತ್ತಿನಹೊಳೆಯ ವಿಚಾರದಲ್ಲಿ ಪಾದಯಾತ್ರೆ ನಡೆಸುವ ಸ್ಥಳೀಯ ಸಂಸದರು ನಾಪತ್ತೆಯಾಗಿದ್ದಾರೆ. ಕೆಲವೇ ದಿನದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಕಾರ್ಯ ಮಾಡುವ ಜತೆಗೆ ರೈತರ ಜಮೀನಿಗೆ ಬರುವ ಅಧಿಕಾರಿಗಳನ್ನು ಕಟ್ಟಿ ಹಾಕುತ್ತೇವೆ ಎಂದು ಎಚ್ಚರಿಸಿದರು.

400ಕೆ.ವಿ. ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗವಿರೋಧಿ ಹೋರಾಟ ಸಮಿತಿ ವಿಟ್ಲ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ಯೋಜನೆ ವಿರೋಧಿಸಿ ಕಳೆದ ಮೂರುವರೆ ವರ್ಷಗಳಿಂದ ಪ್ರತಿಭಟನೆಯನ್ನು ನಡೆಸಿ ರೈತರ ಕಷ್ಟವನ್ನು ಹೇಳಿಕೊಂಡು ಬರಲಾಗುತ್ತಿದೆ. ಜಿಲ್ಲೆಗೆ ಮೂರು ಮಂದಿ ಜಿಲ್ಲಾಧಿಕಾರಿಗಳು ಆಗಮಿಸಿದ್ದು, ಒಬ್ಬರಿಂದಲೂ ಸಕಾರಾತ್ಮಕವಾಗಿ ಉತ್ತರ ಲಭಿಸಿಲ್ಲ. ರೈತರಿಗೆ ಸಹಾಯ ಮಾಡುವ, ರಕ್ಷಣೆಯನ್ನು ಮಾಡುವ ಜವಾಬ್ದಾರಿಯಿರುವ ಅಧಿಕಾರಿಗಳು ಮನಸು ಮಾಡುತ್ತಿಲ್ಲ. ಅಧಿಕಾರಿಗಳೆಲ್ಲರೂ ಒಳಗಿಂದೊಳಗೆ ಕಂಪನಿಯ ಜತೆಗೆ ಶಾಮೀಲಾಗಿದ್ದಾರೆ. ಅವರೆಲ್ಲಾ ಕಂಪನಿಯನ್ನೇ ನಂಬಿ ಬದುಕು ನಡೆಸುತ್ತಿದ್ದಾರಾ ರೈತರು ಇವರಿಗೆ ಅನಿವಾರ್ಯವಲ್ಲವಾ? ಶಾಸಕರು ಈಗಾಗಲೇ ಸರ್ಕಾರಕ್ಕೆ ರೈತರ ಪರವಾಗಿ ಪತ್ರವನ್ನು ಬರೆದಿದ್ದು, ಇದಕ್ಕೆ ಬೆಲೆ ಇಲ್ಲವಾ? ರೈತರ ಪರವಾಗಿದ್ದು, ಯೋಜನೆಯನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ಶಾಸಕರು ಮಾತಿಗೆ ಬದ್ದರಾಗಿದ್ದಾರಾ ಎಂದು ಪ್ರಶ್ನಿಸಿದರು.

ಸಂತ್ರಸ್ತ ರೈತರಾದ ಶ್ಯಾಮ್ ಪ್ರಸಾದ್ ವನಭೋನ, ವಿಷ್ಣು ಭಟ್ ಆಲಂಗಾರು, ಅಣ್ಣು ಗೌಡ ಮಂಜನಾಡಿ ಮತ್ತಿತರರು ಉಪಸ್ಥಿತರಿದ್ದರು.