ಸಕಲೇಶಪುರ: ಸಾಗುವಳಿ ಪತ್ರ ನೀಡಿ ಅಥವಾ ಸಾಯಲು ಬಿಡಿ ಎಂದು ಆಲುವಳ್ಳಿ ಗ್ರಾಮಸ್ಥರು ಶಾಸಕ ಸಿಮೆಂಟ್ ಮಂಜು ಎದುರೇ ಪಟ್ಟು ಹಿಡಿದ ಪ್ರಸಂಗ ನಡೆದಿದೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಡೀಮ್ಡ್ ಅರಣ್ಯ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಗ್ರಾಪಂ
ಪಿಡಿಒ ಗಳು ಹಾಗೂ ಸರ್ವೇ ಇಲಾಖೆ ಅಧಿಕಾರಿಗಳ ಸಭೆಗೆ ಆಗಮಿಸಿದ ಗ್ರಾಮಸ್ಥರು ಶಾಸಕರ ಎದುರೇ ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ವೇ ನಂಬರ್ 47 ರಲ್ಲಿ 173 ಎಕರೆ ಭೂಮಿ ಇದೆ. ಇದರಲ್ಲಿ 112 ಎಕರೆ ಅರಣ್ಯ ಭೂಮಿ ಮತ್ತು 63 ಎಕರೆ ಕಂದಾಯ ಭೂಮಿ ಇದೆ. ಕಂದಾಯ ಭೂಮಿಯಲ್ಲಿ ಕಳೆದ ಹಲವು ತಲೆ ಮಾರುಗಳಿಂದ ಗ್ರಾಮದ 7 ಕುಟುಂಬಗಳು 15 ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದೆ. 1998 ರಲ್ಲಿ ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, 2018 ರಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಆದರೆ, ಸಾಗುವಳಿ ಚೀಟಿ ನೀಡುವ ವೇಳೆ ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ತರುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ. ಅರಣ್ಯ ಇಲಾಖೆ ಇದಕ್ಕೆ ಸಮ್ಮತಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಸಮಸ್ಯೆ ಬಗೆಹರಿಸುವ ತನಕ ಸ್ಥಳದಲ್ಲಿಂದ ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್, ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ವ್ಯಕ್ತಿಗಳೇ ಅರಣ್ಯ ಭೂಮಿಯಲ್ಲಿರುವುದಾಗಿ ಹೇಳಿಕೆ ನೀಡಿದ್ದಾರೆಂದು ವಿವರಣೆ ನೀಡಿದರು ಇದರಿಂದ ಮತ್ತಷ್ಟು ಆಕ್ರೋಶ ಭರಿತರಾದ ಗ್ರಾಮಸ್ಥರು, ಪತ್ರಕ್ಕೆ ಸಹಿ ಹಾಕಿಸಿಕೊಂಡು ಅರಣ್ಯ ಇಲಾಖೆ ವಂಚಿಸಿದೆ ಎಂದು ದೂರಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಮಂಜು, ಮುಂದಿನ ಒಂದು ವಾರದಲ್ಲಿ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕರೆಸಿ ಸ್ಥಳ ತನಿಖೆ ನಡೆಸಿ ಈಗ ನೀಡಿರುವ ವರಧಿಯನ್ನು ಹಿಂಪಡೆದು ತಮಗೆ ಹಕ್ಕುಪತ್ರ ವಿತರಿಸಲಾಗುವುದು ಎಂಬ ಭರವಸೆ ನೀಡಿದ ನಂತರ ಪಟ್ಟು ಸಡಿಲಿಸಿದ ಗ್ರಾಮಸ್ಥರು ಸಭೆಯಿಂದ ಹೊರನಡೆದರು. ಗ್ರಾಮಸ್ಥರಾದ ಪೂರ್ಣೇಶ್,ಚಂದ್ರು,ಅರುಣ್ ಸೇರಿದಂತೆ ಹಲವರಿದ್ದರು.