ಹಳ್ಳಿಕೆರೆ ಹುಂಡಿ ಭಾಗ್ಯರಾಜ್ 
ಜಿಲ್ಲೆ

ಡಿಸಿ ಕಚೇರಿ ಎದುರು ಪ್ರತಿಭಟನಾ ಧರಣಿ ಇಂದು

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜು.30 ರಂದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ತಿಳಿಸಿದರು.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿಗೆ 4 ಸಾವಿರ ರೂ. ಮುಂಗಡ ಹಣ ನಿಗದಿ ಮಾಡಬೇಕು. ಸರ್ಕಾರ ಆದೇಶದಂತೆ ಕಳೆದ ಸಾಲಿನ ಲಾಭಾಂಶವನ್ನು ಪ್ರತಿ ಟನ್‌ಗೆ 150 ರೂ.ನಂತೆ ಬಾಕಿ ಹಣ ನೀಡಬೇಕು. ಸಕ್ಕರೆ ಕಾರ್ಖಾನೆಯ ಮುಖ್ಯ ದ್ವಾರದಲ್ಲಿ ಎಪಿಎಂಸಿ ವತಿಯಿಂದ ತೂಕದ ಯಂತ್ರ ಅಳವಡಿಸಬೇಕು. ಅಂತರ ಜಿಲ್ಲಾ ಕಬ್ಬು ಸಾಗಣೆಗೆ ನಿರ್ಬಂಧವನ್ನು ಹೇರಬಾರದು. ರೈತರಿಗೆ ಮುಕ್ತ ಮಾರುಕಟ್ಟೆಯ ಅವಕಾಶ ಮಾಡಿಕೊಡಬೇಕು. ಇದರಿಂದ ಸಕ್ಕರೆ ಕಾರ್ಖನೆ ಮಾಡುವ ಮೋಸದಿಂದ ರೈತರು ತಪ್ಪಿಸಿ ಕೊಳ್ಳಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ಪ್ರತಿ ಟನ್ ಕಬ್ಬಿಗೆ 10.5 ಕ್ಕೆ ಏರಿಕೆ ಮಾಡಬೇಕು. ಸದ್ಯ 3400 ರೂ.ನಿಗದಿ ಮಾಡಿರುವುದು ರೈತರಿಗೆ ಮಾಡಿದ ದ್ರೋಹವಾಗಿರುತ್ತದೆ. ಇದನ್ನು ಮರು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.

ನಾಲೆಗಳ ಸುತ್ತಮುತ್ತ ಷರತ್ತು ಹಾಕದೆ ವ್ಯವಸಾಯಕ್ಕೆ ನೀರನ್ನು ಬಿಡಬೇಕು. ನಾಲೆ ಸುತ್ತಮುತ್ತ ಪಂಪ್‌ಸೆಟ್ ಹಾಕಬಾರದು ಹಾಗೂ ನಾಲೆಯಿಂದ ಮೋಟರ್‌ಗಳ ಮೂಲಕ ನೀರು ತೆಗೆದುಕೊಳ್ಳಬಾರದು ಎಂಬ ನಿಯಮ ರೈತರಿಗೆ ಮಾರಕವಾಗಿದೆ. ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ಕಿರುಕುಳ ನೀಡುತ್ತಿದ್ದು, ಒಟಿಸ್ ಮೂಲಕ ಸಾಲವನ್ನು ತೀರಿಸಿಕೊಳ್ಳುತ್ತಿಲ್ಲ. ಜತೆಗೆ ಕೃಷಿಗೆ ಹೊಸ ಸಾಲವನ್ನೂ ನೀಡುತ್ತಿಲ್ಲ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಭೆ ಕರೆದು ಆಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.

ರೈತ ಮುಖಂಡ ಕೆರೆಹುಂಡಿ ರಾಜಣ್ಣ, ಕೆಂಪನಪಾಳ್ಯ ಮಂಜು, ಪಾಡ್ಯ ರವಿ, ಉತ್ತಂಬಳ್ಳಿ ಗಣೇಶ್, ಮೂಡ್ನಾಕೂಡು ಸೋಮೇಶ್, ನಾಗರಾಜು, ತೇರಂಬಳ್ಳಿ ರಾಜೇಶ್, ಮಹೇಶ್, ತಿಮ್ಮರಾಜಿಪುರ ರಾಜು, ಮುದ್ದಹಳ್ಳಿ ಚಿಕ್ಕಸ್ವಾಮಿ, ಮಲೆಯೂರು ಮಹೇಂದ್ರ, ತೇರಂಬಳ್ಳಿ ರವಿ, ಟಗರಪುರ ಮಹದೇವಪ್ಪ, ಅಂಬಳೆ ಮಹದೇವಸ್ವಾಮಿ, ಹೊಸಪುರ ಮಾದಪ್ಪ ಸುದ್ದಿಗೋಷ್ಠಿಯಲ್ಲಿದ್ದರು.