ಗದಗ: ನಗರಸಭೆಯ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗಾಗಿ ಆಗ್ರಹಿಸಿ ಗುರುವಾರ ಗದಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ನಾವೆಲ್ಲಾ ನಗರಸಭೆಯಲ್ಲಿ ಸನ್ ೨೦೦೫ ರಿಂದ ಇಲ್ಲಿಯವರೆಗೆ ಮನೆ ಮನೆ ಕಸ ಸಂಗ್ರಹಣೆ ಮಾಡುತ್ತಲೇ ಬಂದಿದ್ದೇವೆ, ರೈತ ಸಮುದಾಯಕ್ಕೆ ಸೇರಿದವರಾಗಿದ್ದು ಯಾವುದೇ ಸೇವಾ ಭದ್ರತೆ ಆಗಲೀ, ಕನಿಷ್ಠ ವೇತನವಾಗಲಿ, ಇಎಸ್‌ಐ ಮತ್ತು ಪಿಎಫ್ ನಂತಹ ಸೌಲಭ್ಯಗಳಿಲ್ಲದೇ ಅತ್ಯಂತ ಕಡಿಮೆ ಸಂಬಳದಲ್ಲಿ ನಾವೆಲ್ಲಾ ಕಾರ್ಯ ನಿರ್ವಹಿಸುತ್ತಿದ್ದೇವೆ.
೧೭ ವರ್ಷಗಳ ಕಾಲ ಸತತವಾಗಿ ಇಂತಹ ನೈರ್ಮಲ್ಯ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ, ಕೊರೊನಾ ಮಹಾಮಾರಿ ಸಮಯದಲ್ಲಿಯ ತಮ್ಮ ಸೇವೆಯನ್ನು ನೀಡುತ್ತಾ ಬಂದಿದ್ದೇವೆ, ನಗರಸಭೆಯ ಆಡಳಿತಾಧಿಕಾರಿಗಳಾಗಿ ಅಂದಿನ ಜಿಲ್ಲಾಧಿಕಾರಿ ಸುಂದರೇಶ ಬಾಬು ಅಕ್ಟೋಬರ ೨೦೨೦ ರಿಂದ ಇಲ್ಲಿಯವರೆಗೆ ೧೦ ಜನರನ್ನು ಪೌರಾಡಳಿತ ನಿರ್ದೇಶನಾಲಯದ ಆದೇಶ, ಸುತ್ತೋಲೆಗಳಿಲ್ಲದೆ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಕಾರ್ಮಿಕ ಇಲಾಖೆ ದಿಪಡಿಸಿದ ಕನಿಷ್ಠ ವೇತನ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ನೀಡುತ್ತಿದ್ದಾರೆ.
ನಿತ್ಯವೂ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ನಮಗೆಲ್ಲಾ ಕನಿಷ್ಠ ವೇತನ ಕೇಳಿದರೆ, ಕಾಯ್ದೆ ಕಾನೂನುಗಳನ್ನು ಹೇಳುವರು ಮತ್ತೆ ಇವರಿಗೆ ಯಾವ ಆಧಾರದಲ್ಲಿ ಹೀಗೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶ, ಸುತ್ತೋಲೆ, ಮತ್ತು ನಡಾವಳಿಗಳ ಹೇಗೆ ತೆಗೆದುಕೊಂಡಿದ್ದಾರೆ ಎನ್ನುವುದೇ ತಿಳಿಯದಾಗಿದೆ.
ನಾವು ಮಹಿಳಾ ಕಾರ್ಮಿಕರಾಗಿದ್ದು ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡಿ, ಕೇಂದ್ರ ಸರಕಾರವು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪ್ರತಿ ದಿನಕ್ಕೆ ೨೧೫ ರುಪಾಯಿ ನೀಡುತ್ತಿದೆ. ಆದರೆ ನಮ್ಮ ನಗರಸಭೆಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಗೌರವಧನ ಅಂತಾ ಕೇವಲ ೬೫೦೦ ರುಪಾಯಿ ನೀಡಲಾಗುತ್ತಿದೆ.
ಈ ದುಬಾರಿ ಕಾಲದಲ್ಲಿ ಇದರಿಂದ ನಮ್ಮ ಕುಟುಂಬ ಪೋಷಣೆ ಮತ್ತು ಮಕ್ಕಳ ವಿದ್ಯಾಭ್ಯಾಸವಾಗಲಿ ಮಾಡಿಸಲು ಆಗುತ್ತಿಲ್ಲ ಅದಕ್ಕಾಗಿ ಕೂಡಲೇ ಕಾರ್ಮಿಕ ಇಲಾಖೆ ನಿಗದಿ ಪಡಿಸಿದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಇಂದ್ರವ್ವ ಸಕ್ಕರೆ, ನಾಗಮ್ಮ ಬಳ್ಳಾರಿ, ದಂಡಕ್ಕ ಬಳ್ಳಾರಿ, ಯಶೋದಾ ಬಳ್ಳಾರಿ, ಭುವನೇಶ್ವರಿ ಜಕ್ಕಲಿ, ವಿಜಯಲಕ್ಷ್ಮೀ ಐನಾಪೂರ, ರೇಣುಕಾ, ತೌಜುಲ್, ಪುಷ್ಪಾ ಬಳ್ಳಾರಿ, ಯಲ್ಲವ್ವ ಬಳ್ಳೂರ, ಯಮುನಾ ಕಲ್ಮನಿ, ಮಹಾದೇವಿ ದೊಡ್ಡಮನಿ, ವಿಜಯಲಕ್ಷ್ಮೀ ಪೂಜಾರ, ಯಲ್ಲಮ್ಮ ಹುಬ್ಬಳ್ಳಿ, ಜ್ಯೋತಿ ಬಳ್ಳಾರಿ, ಪದ್ಮಾ ಬಳ್ಳಾರಿ, ರಾಜೇಶ್ವರಿ ಬಳ್ಳಾರಿ, ಶಾಂತವ್ವ ಗೌಡರ, ಉಮಾ ಗೌಡರ, ಸತ್ಯವ್ವ ಗೌಡರ, ಯಲ್ಲಮ್ಮ ಸಂಗಾಪೂರ, ಶಾಂತಾ ಕುಡತಿನಿ, ಜ್ಯೋತಿ ಹೊಸಳ್ಳಿ, ನಾರಾಯಣಮ್ಮ ರಾಮಗಿರಿ, ಮೀನಾಕ್ಷಿ ಬಳ್ಳಾರಿ, ಹೇಮಾವತಿ ಪರಾಪೂರ, ರೇಣುಕಾ ಗೌಡರ, ಸಕ್ಕೂಬಾಯಿ ಗೌಡರ, ದಂಡಕ ಪೂಜಾರಿ ಮುಂತಾದವರು ಹಾಜರಿದ್ದರು.