ವಿಜಯವಾಣಿ ಸುದ್ದಿಜಾಲ ಗುರುಪುರ
ಉಡುಪಿಯಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡುವ 440ಕೆವಿ ವಿದ್ಯುತ್ ಮಾರ್ಗ ಹಾದು ಹೋಗುವ ದಾರಿಮಧ್ಯೆ ಕುಪ್ಪೆಪದವಿನ ಅಗರಿ ಎಂಬಲ್ಲಿ ಮನೆ ಪಕ್ಕದಲ್ಲಿ ನಿರ್ಮಿಸಲಾಗುತ್ತಿದ್ದ ಟವರ್‌ಗೆ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ ದಂಪತಿ ರಸ್ತೆಯಲ್ಲೇ ಮಲಗಿ ಗುತ್ತಿಗೆ ಕಂಪನಿ ವಾಹನ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಚಂದಯ್ಯ ಪುರುಷ ಮತ್ತು ಇಂದಿರಾ ದಂಪತಿ ತಮ್ಮ ಮನೆಯಿಂದ ಕೇವಲ 20ಮೀಟರ್ ಅಂತರದಲ್ಲಿ ಬೃಹತ್ ವಿದ್ಯುತ್ ಟವರ್ ನಿರ್ಮಾಣವಾಗುತ್ತಿದ್ದು, ಇದರಿಂದ ಮುಂದೆ ಅಪಾಯ ಎದುರಾಗಬಹುದೆಂಬ ಭೀತಿಯಿಂದ ರಸ್ತೆಯಲ್ಲಿ ಮಲಗಿ ಟವರ್ ನಿರ್ಮಾಣಕ್ಕೆ ಸರಕು ಸಾಗಾಟ ಮಾಡುತ್ತಿದ್ದ ವಾಹನಗಳಿಗೆ ತಡೆಯೊಡ್ಡಿದ್ದಾರೆ.
ಗುತ್ತಿಗೆ ಕಂಪನಿ ಅಧಿಕಾರಿಗಳು, ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಕಂದಾಯ ಅಧಿಕಾರಿಗಳು, ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಮತ್ತಿತರರು ಸ್ಥಳಕ್ಕಾಗಮಿಸಿ ದಂಪತಿಯ ಮನವೊಲಿಸಲು ಪ್ರಯತ್ನಿಸಿದರು. ಇದೇ ವೇಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಕೂಡ ಜಮಾಯಿಸಿದರು.
ಟವರ್ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವುದಿಲ್ಲ. ಕಂಪನಿ ವಾಹನ ಮುಂದೆ ಸಾಗಲು ಬಿಡುವುದಿಲ್ಲ. ನಮಗೆ ವಿಷ ಕೊಟ್ಟು ಸಾಯಿಸಿ ನಿಮ್ಮ ಕಾರ್ಯ ಪೂರೈಸಿಕೊಳ್ಳಿ ಎಂದು ಅಧಿಕಾರಿಗಳೆದುರು ಇಂದಿರಾ ಪಟ್ಟು ಹಿಡಿದರು. ಪೊಲೀಸರು ದಂಪತಿಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದರು. ಸ್ಥಳಕ್ಕೆ ಸಹಾಯಕ ಆಯುಕ್ತರು ಬರುವ ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದರು.
ಸಹಾಯಕ ಆಯುಕ್ತ ಹರ್ಷವರ್ಧನ ಮತ್ತು ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರು ಗುತ್ತಿಗೆ ಕಂಪನಿ ಅಧಿಕಾರಿಗಳ ಸಮ್ಮುಖದಲ್ಲಿ ದಂಪತಿ ಜೊತೆ ಚರ್ಚಿಸಿ, ಅವರಿಗೆ ಕಾನೂನಿನ ಪ್ರಕಾರ ಪರಿಹಾರ ನೀಡುವ ಭರವಸೆ ನೀಡಿದರು. ಈ ವೇಳೆ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಗೆ ಪರಿಹಾರವಾಗಿ 50 ಸಾವಿರ ರೂ.ಡಿಡಿ ಹಸ್ತಾಂತರಿಸಲಾಯಿತು. ಬಳಿಕ ದಂಪತಿ ಪ್ರತಿಭಟನೆ ಹಿಂಪಡೆದರು.
ಕುಪ್ಪೆಪದವು ಪಂಚಾಯಿತಿ ಪಿಡಿಒ ಸವಿತಾ ಮಂದೋಲಿಕರ್, ಕಾರ್ಯದರ್ಶಿ ಇಸ್ಮಾಯಿಲ್, ಗ್ರಾಮ ಕರಣಿಕ ಮುತ್ತಪ್ಪ, ಸಹಾಯಕಿ ರಜನಿ, ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬ್ಳ, ಜಿಲ್ಲಾ ಹಸಿರು ಸೇನೆ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಳವೂರು, ಕೃಷ್ಣಪ್ರಸಾದ್ ತಂತ್ರಿ ಮಿಜಾರು, ಆಲ್ಪೋನ್ಸ ಡಿ’ಸೋಜ ಮತ್ತಿತರರು ಇದ್ದರು.