ಕುಂದಗೋಳ: ಬೆಳೆ ಹಾನಿ ಪರಿಹಾರ ವಿತರಣೆ, ಶೆರೇವಾಡ ಬಳಿಯ ಟೋಲ್ ತೆರವುಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ಹಿತರಕ್ಷಣಾ ಸಮಿತಿಯವರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗಾಳಿ ಮರೆಮ್ಮನ ದೇವಸ್ಥಾನ ಹತ್ತಿರ 4 ತಾಸು ರಸ್ತೆ ತಡೆ ನಡೆಸಲಾಯಿತು. ಪಟ್ಟಣದಲ್ಲಿ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ರಸ್ತೆ ತಡೆಯಿಂದ ಲಕ್ಷ್ಮೇಶ್ವರ ಕಡೆಗೆ ಹೋಗುವ ವಾಹನಗಳು ಶೆರೇವಾಡ-ಬೆಟದೂರ-ಕುಂದಗೋಳ ಮಾರ್ಗವಾಗಿ ಸುತ್ತಿ ಬಳಸಿ ಸಂಚರಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಿತಿ ಮುಖಂಡ ಶಿವಾನಂದ ಬೆಂತೂರ ಮಾತನಾಡಿ, ತಾಲೂಕಿನಲ್ಲಿ 2 ತಿಂಗಳ ಹಿಂದೆ ಧಾರಾಕಾರ ಮಳೆಯಿಂದ ಸಾಕಷ್ಟು ಮನೆಗಳು ಬಿದ್ದಿವೆ. ಅಂತಹ ಕುಟುಂಬಗಳಿಗೆ ಇದುವರೆಗೂ ಪರಿಹಾರ ದೊರೆತಿಲ್ಲ. ಒಂದು ಹೆಕ್ಟೇರ್ ಬೆಳೆ ಹಾನಿಗೆ ಕೇವಲ 16800 ರೂ. ಪರಿಹಾರ ನೀಡಲಾಗಿದೆ. ರೈತರು ಹೊಲಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಹಾನಿಯಾಗಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದಾರೆ. ಸರ್ಕಾರ ಕೂಡಲೆ ಹೆಕ್ಟೇರ್ ಬೆಳೆ ಹಾನಿಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಬೆಂಬಲ ಬೆಲೆಯಲ್ಲಿ ಶೇಂಗಾ, ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು. ತಾಲೂಕಿನ ಸಂಶಿಯಲ್ಲಿ ಮನೆ ಕಳೆದುಕೊಂಡ ಅನೇಕ ಕುಟುಂಬಗಳು ಎಪಿಎಂಸಿ ಆವರಣದಲ್ಲಿ ಭಯದಿಂದ ಬದುಕುತ್ತಿದ್ದಾರೆ. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಶೆರೇವಾಡ ಬಳಿ ನಿರ್ವಿುಸಿದ ಟೋಲ್ ತೆರವುಗೊಳಿಸಬೇಕು. ಇಲ್ಲವಾದರೆ ಟೋಲ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಎನ್.ಎಫ್. ನದಾಫ್, ಚನ್ನಬಸನಗೌಡ ಚಿಕ್ಕಗೌಡ್ರ, ಪ್ರಭುಗೌಡ ಶಂಕಾಗೌಡಶ್ಯಾನಿ, ಮಾರುತಿ ಕಲ್ಲೂರ, ಶಿದ್ದಪ್ಪ ಇಂಗಳಳ್ಳಿ, ದೀಲಿಪ ಕಲಾಲ, ಮಲೀಕ ಶಿರೂರ, ವಾಗೇಶ ಶಿಂಗಣ್ಣವರ, ಹನುಮಂತ ಜಾಡರ, ರಮೇಶ ಕತ್ತಿ, ಸಂಜು ತಿಮ್ಮನಗೌಡ್ರ, ಈಶ್ವರಗೌಡ ದ್ಯಾವನಗೌಡ್ರ, ಕರವೇ, ರೈತ ಬೆಳೆ ರಕ್ಷಕ ಸಂಘ, ವಾಹನ ಚಾಲಕರ ಸಂಘ, ಮಹಿಳಾ ಸಂಘಗಳು, ವ್ಯಾಪಾರಸ್ಥರ ಸಂಘದವರು ಇದ್ದರು.