ಜಿಲ್ಲೆ

ದತ್ತಪೀಠದಲ್ಲಿ ಅನ್ಯಧರ್ಮೀಯರ ಪ್ರಾರ್ಥನೆಗೆ ವಿರೋಧಿಸಿ ಶ್ರೀರಾಮಸೇನೆ ಪ್ರತಿಭಟನೆ

ಚಿಕ್ಕಮಗಳೂರು: ದತ್ತಪೀಠದಲ್ಲಿ ಅನ್ಯಧರ್ಮಿಯರು ನಡೆಸುತ್ತಿರುವ ಪ್ರಾರ್ಥನೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಶ್ರೀರಾಮಸೇನೆ ಮುಖಂಡರು ಪೀಠದ ಪೊಲೀಸ್ ಠಾಣೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಧರಣಿ ನಡೆಸಿ ದತ್ತಪೀಠದಲ್ಲಿ ಅನ್ಯಧರ್ಮಿಯರಿಗೆ ಪ್ರಾರ್ಥನೆಗೆ ಅವಕಾಶ ನೀಡಿದರೆ ನಮಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಮುಜರಾಯಿ ಇಲಾಖೆ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಮೈಕ್ ತೆರವುಗೊಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

2002 ರಿಂದ ಪ್ರಾರ್ಥನೆ

ಅನಂತರ ಗಂಗಾಧರ್ ಕುಲಕರ್ಣಿ ಮಾತನಾಡಿ, ನ.23ರಂದು ದತ್ತಪೀಠಕ್ಕೆ ತೆರಳಿದಾಗ ಅನ್ಯಧರ್ಮಿಯರು ಪ್ರಾರ್ಥನೆ ನಡೆಸುತ್ತಿರುವ ಧ್ವನಿ ಕೇಳಿದ್ದು, ಅದನ್ನು ರೆಕಾರ್ಡ್ ಮಾಡಲಾಯಿತು. ಪುನಃ ಗಮನಿಸಲು ನ.24 ರಂದು ಅದೇ ಸಮಯಕ್ಕೆ ಪೀಠಕ್ಕೆ ತೆರಳಿದಾಗ ಮೈಕ್ ಅಳವಡಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಮುಜರಾಯಿ ಕಚೇರಿಗೆ ತೆರಳಿದಾಗ ಅಧಿಕಾರಿಗಳು ಇರಲಿಲ್ಲ. ಹಾಗಾಗಿ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಠಾಣೆ ಮುಂದೆ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಅನಂತರ ಬಂದ ಅಧಿಕಾರಿಗಳು 2002 ರಿಂದ ಈ ಪ್ರಾರ್ಥನೆ ನಡೆಯುತ್ತಿದೆ ಎಂದು ತಿಳಿಸಿದರು.

ಪೂಜೆ, ಭಜನೆಗೆ ಅನುಮತಿ ನೀಡಲಿ

ಕಳೆದ ಸಾಲಿನ ದತ್ತಮಾಲೆ ಸಂದರ್ಭ ಹೋಮ, ಪೂಜೆ ನೆರವೇರಿಸುತ್ತಿರುವಾಗ ಜನ ಹೆಚ್ಚಿದ್ದಾರೆ. ಅನುಕೂಲ ಕಲ್ಪಿಸಿ ಎಂದರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಅನ್ಯ ಧರ್ಮಿಯರಿಗೆ ಪ್ರಾರ್ಥನೆಗೆ ಅವಕಾಶ ನೀಡುವುದಾದರೆ ದತ್ತಮಾಲೆ ಅಭಿಯಾನದಲ್ಲಿ ಆರತಿ, ಪೂಜೆ, ಭಜನೆ ಮಾಡಲಿದ್ದು, ಅದಕ್ಕೂ ಅನುಮತಿ ಕಲ್ಪಿಸಲಿ ಎಂದು ಆಗ್ರಹಿಸಿದರು.

ನ್ಯಾಯಾಲಯ ಯಥಾಸ್ಥಿತಿ ಕಾಪಾಡಿ ಎಂದು ಹೇಳಿರುವಾಗ ಅವರಿಗೆ ಮಾತ್ರ ಅವಕಾಶ ನೀಡುವುದು ಸರಿಯಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ನಾಯಕರೊಂದಿಗೆ ಮಾತನಾಡಿ ನ.25ರಂದು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದರು.

2017 ರಲ್ಲೇ ಡಿಸಿಗೆ ದೂರು

ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, ದತ್ತಪೀಠದಲ್ಲಿ ಮೈಕ್ ಅಳವಡಿಸಿ ಪ್ರಾರ್ಥನೆ ನಡೆಸುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ 2017ರಲ್ಲಿ ಜಿಲ್ಲಾಧಿಕಾರಿಗೆ ಶ್ರೀರಾಮಸೇನೆಯಿಂದ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಮುಂದುವರಿದಿದೆಯಲ್ಲ ಎಂದು ಮುಜರಾಯಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳನ್ನು ಕೇಳಬೇಕು ಎನ್ನುತ್ತಿದ್ದಾರೆ ಎಂದರು. ಪುನೀತ್, ಶರತ್, ಜ್ಞಾನೇಂದ್ರ ಇದ್ದರು.