ಜಿಲ್ಲೆ

ನೇರ ಪಾವತಿಗೆ ಒಳಪಡಿಸಲು ಆಗ್ರಹ: ಹೊರಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಹಾಗೂ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ಪೌರಕಾರ್ಮಿಕರ ಸಂಘದ ಆಶ್ರಯದಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರು ನಗರಸಭೆ ಆವರಣದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲ ಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು.

ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಪೌರಕಾರ್ಮಿಕರ ಜತೆಗೂಡಿ ಕರ್ತವ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್, ಒಳಚರಂಡಿ ಕಾರ್ಮಿಕರು, ಫ್ಯಾನಿಟರಿ ಸೂಪರ್‌ವೈಸರ್ ಸೇರಿ 15 ಸಾವಿರಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತಿದ್ದಾರೆ. 2017ರಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸಿದಾಗ ಇವರನ್ನು ಹೊರಗುತ್ತಿಗೆಯಲ್ಲಿ ಉಳಿಸಲಾಯಿತು. ಕಾಂಗ್ರೆಸ್ ಪಕ್ಷ ಹೊರ ಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸುವುದಾಗಿ ಆಶ್ವಾಸನೆ ನೀಡಿತ್ತು. ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿ ಕಡತ ಹಣಕಾಸು ಇಲಾಖೆಯಲ್ಲಿದ್ದು, ಈ ಕಡತವನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆ ಪದ್ಧತಿ ಕೈ ಬಿಟ್ಟು ಎಲ್ಲ ನೌಕರರನ್ನು ನೇರಪಾವತಿಗೆ ತರಬೇಕು. ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ಅದೇ ರೀತಿ ನೀರು ಸರಬರಾಜು ಸಹಾಯಕರು, ಬೀದಿ ದೀಪ ನಿರ್ವಾಹಕರು ಹಾಗೂ ಸ್ಮಶಾನ ಕಾವಲುಗಾರರನ್ನು ನೇರ ಪಾವತಿಗೆ ಒಳಪಡಿಸಿ ಇವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಬಿ ನಾಗಣ್ಣಗೌಡ, ಜಿಲ್ಲಾಧ್ಯಕ್ಷ ಎನ್.ನಾಗರಾಜ್, ಉಪಾಧ್ಯಕ್ಷ ಪಳಿನಿ, ಮಂಜುನಾಥ್, ಲಕ್ಷ್ಮೀ, ಪಾರ್ವತಿ, ಶಿವು, ಡಿ.ನಾಗರಾಜ್, ಶಿವಕುಮಾರ್, ತಂಗ, ಎಂ.ಮಹದೇವ್, ನಾಗರಾಜ್, ಲೋಕೇಶ್ ಇತರರಿದ್ದರು.