ಜಿಲ್ಲೆ

ಸರ್ಕಾರವನ್ನು ಹರಾಜು ಕೂಗಿ ಪ್ರತಿಭಟನೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ತಮಟೆ ಚಳವಳಿ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಹರಾಜು ಕೂಗುವ ಮೂಲಕ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ, ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ತಮಿಳುನಾಡು ಸರ್ಕಾರ, ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ಯಾವುದೇ ಕ್ರಮಕೈಗೊಂಡಿಲ್ಲ. ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿವೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಕಾವೇರಿ ನ್ಯಾಯಾಧೀಕರಣ ಕಿವಿ ಇಲ್ಲದಂತಹ ಮನುಷ್ಯರು. ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ಪರಿತಪಿಸುವ ಜನರ, ರೈತಗೊಳನ್ನು ಕೇಳುತ್ತಿಲ್ಲ. ಕಾವೇರಿ ನೀರನ್ನು ಹರಾಜಿನಲ್ಲಿ ತಮಿಳುನಾಡಿಗೆ ಮಾರಿಕೊಂಡಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರಕ್ಕೆ ಛೀಮಾರಿ ಹಾಕಿ : ಕಾವೇರಿ, ಕಬಿನಿ ನೀರು ಕುಡಿಯುತ್ತಿರುವ ಮೈಸೂರು ಮತ್ತು ಬೆಂಗಳೂರಿಗರಿಗೆ ಎಚ್ಚೆತ್ತುಕೊಂಡು ಕನ್ನಂಬಾಡಿ ನೀರಿನ್ನು ಉಳಿಸದಿದ್ದರೆ ಮುಂದಿನದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆ ಅನುಭವಿಸಬೇಕಾಗುತ್ತದೆ. ನಿಮ್ಮ ಭವಿಷ್ಯ ನಾಶವಾಗುತ್ತದೆ ಆಗಾಗಿ ಮನೆಯಿಂದ ಬೀದಿಗಿಳಿದು ಹೋರಾಟ ಮಾಡುವ ಮೂಲಕ ರಾಜ್ಯ, ಸರ್ಕಾರ, ಕೇಂದ್ರ ಸರ್ಕಾರ, ಕಾವೇರಿ ನ್ಯಾಯಾಧೀಕರಣಕ್ಕೆ ಛೀಮಾರಿ ಹಾಕಬೇಕು ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಣ್ಯದಹುಂಡಿರಾಜು, ರವಿಚಂದ್ರಪ್ರಸಾದ್ ಕಹಳೆ, ನಿಜಧ್ವನಿ ಗೋವಿಂದರಾಜು, ನಂಜುಂಡಸ್ವಾಮಿ, ಮಹೇಶ್‌ಗೌಡ, ಚಾ.ಹ.ರಾಮು, ಗು.ಪುರುಷೋತ್ತಮ್, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ.ಕುಮಾರ್, ಲಿಂಗರಾಜು, ರಾಚಪ್ಪ ಇತರರು ಭಾಗವಹಿಸಿದ್ದರು.