ಜಿಲ್ಲೆ

ಐದನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಸೇನಾ ಪಡೆ ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರ ಐದನೇ ದಿನಕ್ಕೆ ಕಾಲಿಟ್ಟಿತು.

ನಗರದ ಶ್ರೀಚಾಮರಾಜೇಶ್ವರಿ ಉದ್ಯಾನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.
ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಕುಡಿಕೆ ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಕುಡಿಕೆಯಲ್ಲಿ ತುಂಬಿದ್ದ ನೀರನ್ನು ಚೆಲ್ಲುವ ಮೂಲಕ ತಮಿಳುನಾಡು, ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ವಿರೋಧಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದೆ ಇಂದು ಕೂಡ ಪ್ರತಿಭಟನೆ ಮಾಡುತ್ತಿದ್ದು, ಕಾವೇರಿ ನಿರ್ವಹಣಾ ಮಂಡಳಿ ಕನ್ನಡಿಗರ ಪಾಲಿಗೆ ಕುಡಿಕೆ ನೀರು ಕೊಟ್ಟು, ತಮಿಳುನಾಡಿಗೆ ಕ್ಯೂಸೆಕ್ಸ್ ನೀರು ಬಿಡುವ ಮೂಲಕ ಮಲತಾಯಿ ಧೋರಣಿ ಅನುಸರಿಸುತ್ತಿದೆ. ಅದಕ್ಕಾಗಿ ಕುಡಿಕೆ ನೀರು ಸುರಿಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗಿದೆ ಎಂದರು.

ಕಾವೇರಿ ನಿರ್ವಹಣಾ ಮಂಡಳಿ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದೆ. ತಮಿಳುನಾಡು ಸರ್ಕಾರ ಈ ದೇಶ ಒಕ್ಕೂಟದ ವ್ಯವಸ್ಥೆಗೆ ಅಗೌರವ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಗೌರವ ಅನ್ನುವುದೇ ಇಲ್ಲ. ಮಾತೆತ್ತಿದ್ದರೆ ನೆರೆ ರಾಜ್ಯಗಳ ಮೇಲೆ ಖ್ಯಾತೆ ತೆಗೆಯುವುದು ಇಲ್ಲಸಲ್ಲದ ಆರೋಪ ಮಾಡುವುದು ಮಾಮೂಲಿಯಾಗಿದೆ. ಈ ವಿಚಾರದಲ್ಲಿ ರಾಜ್ಯದ ಸಂಸದರು ಮೌನ ವಹಿಸಿರುವುದು ಅತ್ಯಂತ ಖಂಡನೀಯವಾಗಿದೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತುಹೋಗಿವೆ. ಕೂಡಲೇ ರಾಜ್ಯ ಸರ್ಕಾರ ಕಾವೇರಿ ನೀರು ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಉಗ್ರ ಹೋರಾಟ ಮಾಡಲಾಗವುದು ಎಂದು ಎಚ್ಚರಿಸಿದರು.

ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ, ಮಹೇಶ್‌ಗೌಡ, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಚಾ.ಹ.ರಾಮು, ಸಿದ್ದರಾಜು, ಸಾಗರ್ ರಾವತ್ ಮತ್ತು ಇತರರು ಭಾಗವಹಿಸಿದ್ದರು.

ಉದಯನಿಧಿ ವಿರುದ್ಧ ಕಿಡಿ:
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಸಚಿವ ಉದಯ ನಿಧಿ ಹೇಳಿಕೆಗೆ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಕಿಡಿಕಾರಿದರು. ಸನಾತನ ಧರ್ಮದ ಬಗ್ಗೆ ವಿವಾದಾದ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ. ಸನಾತನ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಎಲ್ಲ ಧರ್ಮಗಳನ್ನೂ ಗೌರವಿಸುವುದನ್ನು ಕಲಿಯಬೇಕು ಎಂದರು.