ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬೀಡಿ ಕಾರ್ಮಿಕರಿಗೆ 2024-25ನೇ ಸಾಲಿನ ತುಟ್ಟಿಭತ್ಯೆ 22.72 ರೂ.ಕೂಡಲೇ ಪಾವತಿಸುವಂತೆ ಆಗ್ರಹಿಸಿ ವಿವಿಧ ಬೀಡಿ ಕಂಪನಿಗಳ ಎದುರು ಜಿಲ್ಲಾದ್ಯಂತ ಮೇ 16ರಿಂದ ಪ್ರತಿಭಟನೆ ಆರಂಭವಾಗಿದ್ದು, ಅದರ ಭಾಗವಾಗಿ ಗುರುವಾರ ಪಾಣೆಮಂಗಳೂರಿನ ಸದರ್ನ್ ಇಂಡಿಯಾ ಬೀಡಿ ಕಂಪನಿ ಎದುರು ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಷನ್ ಹಾಗೂ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್ ಜಂಟಿ ಆಶ್ರಯದಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನಾ ಸಭೆ ಜರುಗಿತು.
ಏ.1ರಿಂದ ಬೀಡಿ ತುಟ್ಟಿಭತ್ಯೆ ಪಾವತಿಸದೆ ವಿಳಂಬಿಸುತ್ತಿರುವ ಮಾಲೀಕರ ನೀತಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಗಜೆಟೆಡ್ ನೋಟಿಫಿಕೇಶನ್ ಪ್ರಕಾರ ಸಾವಿರ ಬೀಡಿಗೆ ರೂ.22.72 ಏಪ್ರಿಲ್ 1ರಿಂದಲೇ ಮಾಲೀಕರು ಬೀಡಿ ಕಾರ್ಮಿಕರಿಗೆ ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ ಮಾಲೀಕರು ಮೂರು ತಿಂಗಳು ಕಳೆಯುತ್ತಾ ಬಂದರೂ ಈವರೆಗೂ ಮೊತ್ತ ಪಾವತಿಸಿಲ್ಲ. ಈ ಮಧ್ಯೆ ಸಹಾಯಕ ಕಾರ್ಮಿಕ ಆಯುಕ್ತರನ್ನು ಜಂಟಿ ನಿಯೋಗ ಭೇಟಿಯಾಗಿ ಮನವಿ ಮಾಡಿದಾಗ ಆಯುಕ್ತರು ಜೂನ್ 21ರಂದು ಜಿಲ್ಲೆಯ ಎಲ್ಲ ಬೀಡಿ ಮಾಲೀಕರು ಮತ್ತು ಕಾರ್ಮಿಕ ಸಂಘಟನೆಗಳ ಸಭೆ ಕರೆದಿದ್ದಾರೆ. ಒಂದು ವೇಳೆ ಮಾತುಕತೆ ವಿಫಲವಾದರೆ ತುಟ್ಟಿಭತ್ಯೆ ಜಾರಿಯಾಗುವ ತನಕ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಬೀಡಿ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಎಚ್ಚರಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಷನ್(ಎಐಟಿಯುಸಿ) ಅಧ್ಯಕ್ಷ ವಿ.ಸೀತರಾಂ ಬೇರಿಂಜ, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್(ಸಿಐಟಿಯು) ಅಧ್ಯಕ್ಷ ವಸಂತ ಆಚಾರಿ ಮಾತನಾಡಿದರು. ನೇತೃತ್ವವನ್ನು ಎಐಟಿಯುಸಿ ಜಿಲ್ಲಾ ಸಮಿತಿ ಸದಸ್ಯ ವಿ.ಕುಕ್ಯಾನ್, ಬೀಡಿ ಫೆಡರೇಷನ್‌ನ ಜಿಲ್ಲಾ ಕೋಶಾಧಿಕಾರಿ ಬಿ.ಶೇಖರ್, ಫೆಡರೇಷನ್‌ನ ಸಹಕಾರ್ಯದರ್ಶಿ ಎಂ.ಕರುಣಾಕರ, ಶಮಿತಾ, ಮಮತಾ, ಕೇಶವತಿ, ಹರ್ಷಿತ್, ಮೋಹಿನಿ, ರೇವತಿ ಎಸ್., ಪೂವಪ್ಪ ಗಟ್ಟಿ, ರಾಜೀವ ಪೂಜಾರಿ, ಎಂ.ಬಿ.ಭಾಸ್ಕರ ಹಾಗೂ ಸಿಐಟಿಯುನ ಚಂದ್ರ ಪೂಜಾರಿ, ಲೋಲಾಕ್ಷಿ ಬಂಟ್ವಾಳ, ವಹಿಸಿದ್ದರು.
ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಐಟಿಯುನ ಚಂದ್ರ ಪೂಜಾರಿ ವಂದಿಸಿದರು.