ಮಂಡ್ಯ: ತಾಲೂಕಿನ ಹನಕೆರೆ ಗ್ರಾಮದ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಪರಿಣಾಮ, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಈ ವೇಳೆ ಒಬ್ಬ ಗಾಯಗೊಂಡಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಮದಿಂದ ಸುಮಾರು 600 ಮೀಟರ್ ದೂರದಲ್ಲಿ ಅವೈಜ್ಞಾನಿಕವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡಲಾಗಿದೆ. ಇದರಿಂದ 15ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಹನಕೆರೆ ಬಳಿಯೇ ಅಂಡರ್‌ಪಾಸ್ ಮಾಡಬೇಕೆಂದು ಒತ್ತಾಯಿಸಿ ಬೆಳಗ್ಗೆ 8 ಗಂಟೆಯಿಂದಲೇ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಪ್ರಾರಂಭಿಸಲಾಯಿತು. ಅಕ್ಕಪಕ್ಕದ ಗ್ರಾಮಸ್ಥರೆಲ್ಲರೂ ಎತ್ತಿನಗಾಡಿಗಳೊಂದಿಗೆ ಹಾಜರಾಗಿ, ಹೆದ್ದಾರಿಯಲ್ಲಿ ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತವು. ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಕಾರಣ ಹೆದ್ದಾರಿಯಲ್ಲಿ ಸಂಚರಿಸಬೇಕಾದ ವಾಹನಗಳನ್ನು ಕೆ.ಎಂ.ದೊಡ್ಡಿ ಮಾರ್ಗವಾಗಿ ಕಳುಹಿಸಲಾಯಿತು.
ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ಹಲವು ಬಾರಿ ಒತ್ತಾಯ ಮಾಡಿ ಪ್ರತಿಭಟನೆ ಮಾಡಲಾಗಿದೆ. ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ದಿನನಿತ್ಯದ ಕೆಲಸಕ್ಕೆ ಹೋಗಲು ಬಳಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದಾಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತಾದರೂ ಸರಿಪಡಿಸಲಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಒಬ್ಬನಿಗೆ ಗಾಯ, ಇಬ್ಬರು ವಶ: ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಈ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಗಮಿಸಿದರು. ಅವರ ಭರವಸೆಗೆ ಗ್ರಾಮಸ್ಥರು ಒಪ್ಪಲಿಲ್ಲ. ಅಂಡರ್‌ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ 8 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಸರ್ಕಾರದ ಆದೇಶದ ಪ್ರತಿಯನ್ನು ತೋರಿದರು. ಆದರೆ ಇಲ್ಲಿಯವರೆಗೂ ಇಂತಹ ಸಬೂಬುಗಳನ್ನೇ ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪ್ರತಿಯನ್ನು ಹರಿದು ಹಾಕಿದರು.
ಮೂರು ಗಂಟೆಗೂ ಹೆಚ್ಚು ಕಾಲ ರೈತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪರಿಣಾಮ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಹಾಗೂ ಪ್ರಸನ್ನ ಎನ್.ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಇದೇ ಸಂದರ್ಭದಲ್ಲಿ ರೈತ ಸಂಘದ ದಯಾನಂದ ಎಂಬುವರ ತಲೆಗೆ ಪಟ್ಟು ಬಿದ್ದಿದ್ದು, ಅವರನ್ನು ಮಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.