ಮಂಡ್ಯ: ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಬಲಾಢ್ಯವಾಗಿರುವ ಸಮುದಾಯಗಳನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇತ್ತೀಚೆಗೆ ಬಲಾಢ್ಯ ಸಮುದಾಯಗಳು ಪ್ರವರ್ಗ 2ಎ ಮತ್ತು 1ಎ ಮೀಸಲಾತಿಗಾಗಿ ಹೋರಾಟವನ್ನು ನಡೆಸುತ್ತಿವೆ. ಇದರಿಂದ ಸಾಮಾಜಿಕ ಸ್ಥಿತಿಗತಿಗಳ ಆಧಾರದ ಮೇಲೆ ಅಧ್ಯಯನ ನಡೆಸಿ ಸಂವಿಧಾನಬದ್ಧವಾಗಿ ನೀಡಲಾಗಿರುವ ಮೀಸಲಾತಿಗೆ ಅಪಚಾರ ಎಸಗಿದಂತಾಗುತ್ತದೆ. ಮೀಸಲಾತಿಯ ಉದ್ದೇಶವೇ ಅನರ್ಥವಾಗುತ್ತದೆ ಎಂದು ಆರೋಪಿಸಿದರು.
ಈಗಾಗಲೇ ಪ್ರವರ್ಗ 3ಬಿಯಲ್ಲಿ ಶೇ.5ರಷ್ಟು ಮತ್ತು ಸಾಮಾನ್ಯ ವರ್ಗದಲ್ಲಿ ಶೇ.50ರಷ್ಟು ಪಾಲನ್ನು ಪಡೆಯುತ್ತಿರುವ ಲಿಂಗಾಯಿತ ಪಂಚಮಸಾಲಿ ಸಮುದಾಯಗಳು ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹಿಸುತ್ತಿರುವುದು ಅವೈಜ್ಞಾನಿಕವಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಜಾರಿಗೊಳಿಸಬೇಕು. ಅಂದಿನ ವೈಜ್ಞಾನಿಕ ಅಂಕಿ-ಅಂಶಗಳ ಪ್ರಕಾರ ನೂತನ ಮೀಸಲಾತಿ ಪ್ರಕಟಿಸಬೇಕು. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿಗೆ ಧಕ್ಕೆ ತಂದು ಬಲಾಢ್ಯ ಸಮುದಾಯಗಳನ್ನು ಪ್ರವರ್ಗ 2ಎಗೆ ಸೇರಿಸುವ ಪ್ರಯತ್ನ ನಡೆಸಿದರೆ ಅದರ ವಿರುದ್ಧ ರಾಜ್ಯಾದ್ಯಂತ ಗಂಭೀರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಎಚ್.ನಾಗರಾಜು, ಕಾರ್ಯದರ್ಶಿ ಎಂ.ಕೃಷ್ಣ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಜಿಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ಹಿಂದುಳಿದ ವರ್ಗಗಳ ಮುಖಂಡರಾದ ಎಚ್.ಪಿ.ಸತೀಶ್, ಎಂ.ಎಸ್.ರಾಜಣ್ಣ, ಸಾತನೂರು ಕೃಷ್ಣ, ಬಿ.ಟಿ.ಗುರುರಾಜ್, ಡಿ.ರಮೇಶ್, ಅಮ್ಜದ್‌ಪಾಷ, ಚನ್ನಬಸವಣ್ಣ, ಕೆ.ಸಿ.ಚನ್ನೇಗೌಡ, ಯಲಿಯೂರು ಪ್ರದೀಪ್, ಎಚ್.ಎಸ್.ಹನುಮಂತಯ್ಯ, ಶಕುಂತಲಾ ಇತರರಿದ್ದರು.