ಮಂಡ್ಯ: ಪ್ರತ್ಯೇಕ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಸವಿತಾ ಸಮಾಜ ಮೀಸಲಾತಿ ಡಾ.ಎಂ.ಎಸ್.ಮುತ್ತುರಾಜ್ ಹೋರಾಟ ಸಮಿತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಸಮಿತಿ ಪದಾಧಿಕಾರಿಗಳು ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಸವಿತಾ ಸಮಾಜ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಸಮುದಾಯದ ಜನರು ಕಾಯಕ ಸಮಾಜ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಸ್ವಾಭಿಮಾನಿಯಾಗಿ ದುಡಿಯುತ್ತಿರುವ ನಮಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸುವ ಭರವಸೆ ಇದೆ. ಧ್ವನಿ ಇರದ ನಮ್ಮ ಸಮಾಜ ಶತ ಶತಮಾನಗಳಿಂದ ನೋವನ್ನು ಅನುಭವಿಸಿಕೊಂಡು ಬಂದಿದ್ದೇವೆ. ಇಂತಹದರ ನಡುವೆ ನಮ್ಮನ್ನು ಕೀಳುಮಟ್ಟದಲ್ಲಿ ನೋಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಸಮುದಾಯದ ಜನರು ಯಾರಿಗೂ ಮೋಸ ಮಾಡದೇ ಗೌರವದಿಂದ ಎಲ್ಲ ಜಾತಿ, ಧರ್ಮವೆಂದು ಬೇದ ಭಾವ ಮಾಡದೇ ಸೇವೆ ಮಾಡುತ್ತಿದ್ದಾರೆ. ಆದರೂ ಕೂಡ ನಮಗೆ ಸರಿಯಾಗಿ ಮೀಸಲಾತಿ ಸಿಕ್ಕಿಲ್ಲ. ಹೆಚ್ಚು ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಚಿತ್ರನಟ ಮುತ್ತುರಾಜ್, ನಾಗರಾಜು, ರಾಮಾಂಜನಪ್ಪ, ಶ್ರೀನಿವಾಸ್, ಮಂಜುನಾಥ್, ಬಸವರಾಜು, ಅಶ್ವತ್ಥನಾರಾಯಣ್, ನಟರಾಜು ಇತರರಿದ್ದರು.