ಜಿಲ್ಲೆ

ಪಿಡಿಒಗಳಿಂದ ಅನುದಾನ ದುರ್ಬಳಕೆ ಆರೋಪ: ಶೋಷಿತರು ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿ ಸದಸ್ಯರ ಪ್ರತಿಭಟನೆ

reportermys

ಪಾಂಡವಪುರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ನೀಡುವ ವಿಶೇಷ ಅನುದಾನವನ್ನು ಪಿಡಿಒಗಳು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಶೋಷಿತರು ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿ ಸದಸ್ಯರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಪಿಡಿಒಗಳ ವಿರುದ್ಧ ಧಿಕ್ಕಾರ ಕೂಗಿ, ಮೀಸಲಾದ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಆಗ್ರಹಿಸಿದರು. ತಾಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಬಹುತೇಕ ಗ್ರಾಪಂನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿರುವ ಶೇ.25 ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು ಎಂಬ ಸರ್ಕಾರದ ನಿಯಮವಿದ್ದರೂ, ಅಧಿಕಾರಿಗಳು ಮನಸ್ಸೋಇಚ್ಛೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಸಮುದಾಯಕ್ಕೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನೇ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಲಕ್ಷ್ಮೀಸಾಗರ, ಅರಳಕುಪ್ಪೆ, ಹರವು, ಕೆ.ಬೆಟ್ಟಹಳ್ಳಿ, ಟಿ.ಎಸ್.ಛತ್ರ, ಚಿಕ್ಕಾಡೆ, ಕಟ್ಟೇರಿ ಹಾಗೂ ಮಾಣಿಕ್ಯನಹಳ್ಳಿ ಗ್ರಾಪಂಗಳಲ್ಲಿ ಅನುದಾನ ದುರ್ಬಳಕೆ ಮಾಡಿಕೊಂಡು ಸಮುದಾಯವನ್ನು ವಂಚಿಸಿರುವುದು ಕಂಡು ಬಂದಿದೆ. ಹೀಗಾಗಿ ಎಲ್ಲ ಗ್ರಾಮ ಪಂಚಾಯಿತಿಗಳ ಹಣಕಾಸು ವಹಿವಾಟನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರದಿಂದ ಬರುವ ಅನುದಾನದ ವಿವರವನ್ನು ಎಲ್ಲರಿಗೂ ತಿಳಿಯುವಂತೆ ಪಾರದರ್ಶಕವಾಗಿ ಮಾಹಿತಿ ಫಲಕದಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ದಲಿತರಿಗೆ ನೀಡಿರುವ ಕುಳುವಾಡಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ದುರಸ್ತಿ ಮಾಡಿಕೊಡಬೇಕು. ತಾಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಅಂಬೇಡ್ಕರ್ ಭವನಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸ್ಮಶಾನಗಳನ್ನು ಮಂಜೂರು ಮಾಡಬೇಕು ಹಾಗೂ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರ್ ಎಸ್.ಎಲ್.ನಯನಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಮುದಾಯದ ಮುಖಂಡರಾದ ಚಿಕ್ಕಾಡೆ ಮದನ್‌ಕುಮಾರ್, ಚಂದ್ರೆ ಅಶ್ವಥ್, ಕನಗನಮರಡಿ ಕೃಷ್ಣಮೂರ್ತಿ, ಮಂಡಿಬೆಟ್ಟಹಳ್ಳಿ ಮಂಜು, ಹರಳಹಳ್ಳಿ ಜಯಕುಮಾರ್, ಮಾಣಿಕ್ಯನಹಳ್ಳಿ ಕುಮಾರ, ಅಗಟಹಳ್ಳಿ ಪ್ರಮೋದ್, ಶ್ರೀನಾಥ್, ನಾಗೇಂದ್ರ, ವೆಂಕಟೇಶ್, ನಂದ, ರಾಘವೇಂದ್ರ ಇತರರು ಇದ್ದರು.