ಜಿಲ್ಲೆ

ರೈತರ ವಿರುದ್ಧ ದೂರು ದಾಖಲಿಸಿದ ಸೆಸ್ಕ್: ಅರಕೆರೆ ಪೊಲೀಸ್ ಠಾಣೆಗೆ ದೊಡ್ಡಪಾಳ್ಯ ಗ್ರಾಮಸ್ಥರ ಮುತ್ತಿಗೆ

reportermys

ಶ್ರೀರಂಗಪಟ್ಟಣ: ಸರ್ಕಾರದ ಭಾಗ್ಯಜ್ಯೋತಿ ಹಾಗೂ ಕುಠೀರ ಜ್ಯೋತಿ ವಿದ್ಯುತ್ ಸಂಪರ್ಕ ಕಡಿತಗೊಳಿತಗೊಳಿಸಿದ್ದನ್ನು ಪ್ರಶ್ನಿಸಿದ ರೈತರ ವಿರುದ್ಧ ಸೆಸ್ಕ್ ಇಲಾಖೆ ಸಿಬ್ಬಂದಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ತಾಲೂಕಿನ ದೊಡ್ಡಪಾಳ್ಯ ಗ್ರಾಮಸ್ಥರು ಅರಕೆರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈತ ಮುಖಂಡ ಮಂಜೇಶ್‌ಗೌಡ ಮಾತನಾಡಿ, ಭಾಗ್ಯಜ್ಯೋತಿ ಹಾಗೂ ಕುಠೀರ ಜ್ಯೋತಿ ಯೋಜನೆಯಡಿ ಸಾವಿರಾರು ರೈತರು ಹಾಗೂ ಬಡಜನರು ಸಂಪರ್ಕ ಪಡೆದಿದ್ದಾರೆ. ಆದರೆ ಸರ್ಕಾರ ಈ ಯೋಜನೆಯ ಫಲಾನುಭವಿಗಳಿಂದಲೂ ಹಣ ವಸೂಲಿಗೆ ಮುಂದಾಗಿದೆ. ಹಣ ಪಾವತಿಸದ ರೈತರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಜತೆಗೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿದರು.
ದೊಡ್ಡಪಾಳ್ಯ ಗ್ರಾಮದ ಕುಮಾರ ಹಾಗೂ ಕಾಶಿರಾಜು ಎಂಬುವರ ರೈತ ಕುಟುಂಬಗಳ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ವೇಳೆ ರೈತರು ಸೆಸ್ಕ್ ಇಲಾಖೆಯ ಜೆಇ ಮಂಜುನಾಥ್ ಹಾಗೂ ಲೈನ್‌ಮನ್ ಸತೀಶ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಬಂಧ ಇಬ್ಬರು ರೈತರ ಮೇಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ದುರುದ್ದೇಶಪೂರ್ವಕವಾಗಿ ಮೊಕದ್ದಮೆ ದಾಖಲಿಸಲು ಮುಂದಾಗಿರುವುದು ಖಂಡನೀಯ. ಈ ಪ್ರಕರಣ ಖಂಡಿಸಿ ದೊಡ್ಡಪಾಳ್ಯ ಗ್ರಾಮಸ್ಥರು ಹೋರಾಟ ಆರಂಭಿಸಿದ್ದು, ನ್ಯಾಯ ಸಿಗದಿದ್ದರೆ ತಾಲೂಕು ಹಾಗೂ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ರಾಜಿ ಸಂಧಾನ: ಬಳಿಕ ದೊಡ್ಡಪಾಳ್ಯ ಗ್ರಾಮಸ್ಥರು ಹಾಗೂ ಸೆಸ್ಕ್ ಸಿಬ್ಬಂದಿ ನಡುವೆ ಅರಕೆರೆ ಠಾಣೆ ಪೊಲೀಸರು ರಾಜಿ ಸಂಧಾನ ನಡೆಸಿದರು. ಬಳಿಕ ಸೆಸ್ಕ್ ಇಲಾಖೆ ಸಿಬ್ಬಂದಿ ತಮ್ಮ ದೂರು ವಾಪಸ್ ಪಡೆಯುವ ಜತೆಗೆ ಭಾಗ್ಯಜ್ಯೋತಿ ಹಾಗೂ ಕುಠೀರ ಜ್ಯೋತಿ ಫಲಾನುಭವಿಗಳ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಜನರು ನೀಡಿದಷ್ಟು ಹಣವನ್ನು ಪಾವತಿಸಿಕೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ತಾಪಂ ಮಾಜಿ ಸದಸ್ಯ ತಡಗವಾಡಿ ದೇವೇಗೌಡ, ದೊಡ್ಡಪಾಳ್ಯ ಗ್ರಾಮದ ಮುಖಂಡರಾದ ಜಯರಾಮೇಗೌಡ, ಚಂದ್ರಶೇಖರ್, ಡಿ.ಎಂ.ಕೃಷ್ಣೇಗೌಡ, ಡಿ.ಬಿ.ರುಕ್ಮಾಂಗದ, ಶಿವರಾಜು ಹಾಜರಿದ್ದರು.