ಜಿಲ್ಲೆ

ನಗರದಲ್ಲಿ ಈಡುಗಾಯಿ ಒಡೆಯುವ ಚಳವಳಿ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ನಗರದಲ್ಲಿ ಈಡುಗಾಯಿ ಒಡೆಯುವ ಚಳವಳಿ ನಡೆಸಲಾಯಿತು.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಹಲವು ವರ್ಷದಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಘೋಷಣೆ ಕೂಗಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರಂತರ ಒತ್ತಾಯ ಮಾಡುತ್ತಿದ್ದರೂ ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಪ್ರಯೋಜನ ಆಗಿಲ್ಲ. ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಲಾಗಿದೆ. ಆದಾಗ್ಯೂ ಅಂದಿನಿಂದ ಎಲ್ಲ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಎಂಇಎಸ್ ರಾಜ್ಯದ ಗಡಿನಾಡಿಗೆ ಮಾರಕ. ಎಂಇಎಸ್ ನಿಷೇಧಕ್ಕೆ ಹಲವು ವರ್ಷಗಳಿಂದ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇಂದಿಗೂ ಅದನ್ನು ಯಾವುದೇ ರಾಜ್ಯ ಸರ್ಕಾರ ಈಡೇರಿಸಿಲ್ಲ. ಕಳಸಬಂಡೂರಿ, ಮೇಕೆದಾಟು ಯೋಜನೆ ಜಾರಿಯಾಗಿಲ್ಲ. ರಾಜ್ಯದಲ್ಲಿ ಪರಭಾಷಿಕರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಪರಭಾಷಿಕರಿಂದ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು. ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದಕ್ಕೆ ಪೂರಕವಾದ ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಿಲ್ಲ. ಐಟಿಬಿಟಿ ಮಸೂದೆ ಅನುಷ್ಠಾನಗೊಂಡಿಲ್ಲ. ಈ ಬಗ್ಗೆಯೂ ರಾಜ್ಯಸರ್ಕಾರ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.

ಮಾ.22ರಂದು ಬಂದ್‌ಗೆ ಕರೆ ಕೊಟ್ಟಿದ್ದೆವು. ಮಂಡ್ಯದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಮಂಡ್ಯ ಜನಕ್ಕೆ ಧನ್ಯವಾದ ಹೇಳುತ್ತೇವೆ. ಅದೇ ರೀತಿ ರಾಜ್ಯದ ಉದ್ದಗಲಕ್ಕೂ ಈಡುಗಾಯಿ ಒಡೆಯುವ ಚಳವಳಿ ಮೂಲಕ ವಿಶೇಷ, ವಿನೂತನವಾಗಿ ಮತ್ತೊಂದು ಹೋರಾಟ ಮಾಡಲಾಗುತ್ತಿದೆ. ಈ ಮೂಲಕ ಎಂಇಎಸ್ ನಿಷೇಧ, ಉತ್ತರ ಕರ್ನಾಟಕ ಅಭಿವೃದ್ಧಿ, ಪರಭಾಷಿಕರ ದಬ್ಬಾಳಿಕೆ, ಪರಭಾಷಿಕರ ಚಿತ್ರಗಳ ಬಹಿಷ್ಕಾರ, ಕೇಂದ್ರದ ಮಲತಾಯಿ ಧೋರಣೆ, ಬಜೆಟ್‌ನಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಖಂಡನೆ, ಬೆಳಗಾವಿ ಅಭಿವೃದ್ಧಿಯಾಗಬೇಕು. ಮೆಟ್ರೋ ದರ ಇಳಿಕೆ ಮಾಡುವುದರ ಜತೆಗೆ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಮಹದಾಯಿ-ಕಳಸ ಬಂಡೂರಿ ಯೋಜನೆ ಅನುಷ್ಠಾನಗೊಳ್ಳಬೇಕು, ಕೊಪ್ಪಳ ಸುತ್ತಮುತ್ತ ಕಾರ್ಖಾನೆ ಪ್ರಾರಂಭಿಸಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಾಟಾಳ್ ಪಕ್ಷದ ಕಾರ್ಯಕರ್ತರಾದ ಪಾರ್ಥಸಾರಥಿ, ನಾರಾಯಣಸ್ವಾಮಿ, ಮುನಾವರ್, ಅಂಬುಜಾಕ್ಷಿ, ಸ್ಪರ್ಶ, ಜಾಫರ್, ಮುಬಾರಕ್ ಇತರರಿದ್ದರು.