ಜಿಲ್ಲೆ

ಸಾಮಾಜಿಕ ಗಣತಿ ಕೆಲಸಕ್ಕೆ ರಿಯಾಯಿತಿ ನೀಡಿ

ಅಂಗನವಾಡಿ ನೌಕರರಿಂದ ಡಿಸಿ ಕಚೇರಿ ಬಳಿ ಧರಣಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಾಮಾಜಿಕೆ ಸಮೀಕ್ಷಾ ಕಾರ್ಯದಲ್ಲಿ ಅನಾರೋಗ್ಯ ಪೀಡಿತ ಅಂಗನವಾಡಿ ನೌಕರರಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳೆಯರು ಸೋಮವಾರ (ಸೆ.29) ದಿಢೀರ್​ ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, ನೌಕರರು ಕೆಲವು ಸಮಸ್ಯೆಯಿಂದಾಗಿ ಸಮೀಕ್ಷಾ ಕಾರ್ಯದಿಂದ ಕೈಬಿಡುವಂತೆ ಕೇಳಿಕೊಂಡರೆ ಜನಪ್ರತಿನಿಧಿ ಕಾಯ್ದೆಯಡಿ ವಜಾ ಮಾಡುತ್ತೇವೆಂದು ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಚುನಾವಣಾ ಆಯೋಗದ ಸುತ್ತೋಲೆಯಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಸಾಮಾಜಿಕ ಸಮೀಕ್ಷೆಗೆ ಸಿ ದರ್ಜೆ ನೌಕರರನ್ನು ನೇಮಿಸಿಕೊಳ್ಳಬೇಕು ಎಂದಿದೆ. ಆದರೂ ಅಧಿಕಾರಿಗಳು ನಮ್ಮನ್ನು ಜೈಲಿಗೆ ಕಳುಹಿಸುವುದಾಗಿ ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳು ಬೆದರಿಕೆ ಹಾಕುತ್ತಿರುವುದರಿಂದ ಮಹಿಳೆಯರು ಮಾನಸಿಕವಾಗಿ ನೊಂದಿದ್ದಾರೆ. ಸ್ಥಳೀಯವಾಗಿ ಸಮೀಕ್ಷೆಗೆ ಅವಕಾಶ ನೀಡದೆ ಬೇರೆ ಬೇರೆ ದೂರದ ಗ್ರಾಮಗಳಿಗೆ ನಿಯೋಜಿಸಿದ್ದರಿಂದ ಅಂಗನವಾಡಿ ನೌಕರರಿಗೆ ಸಮಸ್ಯೆಯಾಗಿದೆ. ಇದರೊಂದಿಗೆ ಎಫ್​ಎಸ್​ಆರ್​, ಬಿಎಲ್​ಒ ಕೆಲಸಗಳನ್ನು ಮಾಡಬೇಕೆಂದು ನೋಟಿಸ್​ ನೀಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಸಹ ಮಹಿಳೆಯರನ್ನು ಗುಲಾಮರಂತೆ ದುಡಿಸುತ್ತಿದ್ದು, ಅವರ ಆರೋಗ್ಯ ಹದಗೆಡುತ್ತಿದೆ ಎಂದು ಆರೋಪಿಸಿದರು.

ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯೆ ಭಾರತಿ, ಯಶೋದಾ ಕೆ., ಆಶಾಲತಾ, ಶಾಂತಾ, ಪ್ರೇಮಾ, ಪ್ರಮೀಳಾ ಉಡುಪಿ, ಜಯಲಕ್ಷ್ಮೀ, ಸರೋಜಾ, ಸರೋಜಿನಿ ಬ್ರಹ್ಮಾವರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ ಕಲ್ಲಾಗರ, ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಜಿಲ್ಲಾ ಕೋಶಾಧಿಕಾರಿ ಕವಿರಾಜ ಎಸ್​. ಕಾಂಚನ್​ ಇತರರಿದ್ದರು.

ಸಹಕರಿಸದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ

ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ಧರಣಿ ನಿರತ ಮಹಿಳೆಯರಿಂದ ಮನವಿ ಸ್ವೀಕರಿಸಿದರು. ಸಿ ದರ್ಜೆಯ ನೌಕರರು ನಮ್ಮ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಅಂಗನವಾಡಿ ನೌಕರರನ್ನು ನಿಯೋಜಿಸಲಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯವು ಸರ್ಕಾರದ ಕೆಲಸವಾಗಿದೆ. ಇದಕ್ಕೆ ತಾವುಗಳು ಸಹಕರಿಸದಿದ್ದಲ್ಲಿ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.