Oplus_131072 
ಜಿಲ್ಲೆ

ಸೂರಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಬೇಕು- ಪ್ರತಿಭಟನೆ

ಎ. ಆರ್. ರಘುರಾಮ

ಅನುಚಿತ ವರ್ತತೆ ತೋರಿದ ನಿರ್ವಾಹಕ ಮತ್ತು ಚಾಲಕನ  ಕ್ಷಮೆ

ನಂಜನಗೂಡು : ತಾಲೂಕಿನ ಸೂರಹಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಂಜನಗೂಡಿನ ಸಾರಿಗೆ ಬಸ್ ಡಿಪೋ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಕೆಎಸ್‌ಆರ್‌ಟಿಸಿ ಘಟಕದ ಮುಂಭಾಗ ಜಮಾಯಿಸಿದ ರೈತ ಸಂಘದ ಮುಖಂಡರು ಮತ್ತು ಕಾರ್ಯಕರ್ತರು, ಸೂರಹಳ್ಳಿ ಗ್ರಾಮಕ್ಕೆ ಬಸ್ ಸಮಸ್ಯೆ ಕಾಡುತ್ತಿದೆ. ಈ ಮಾರ್ಗದ ಕೆಲವೇ ಬಸ್ ಗಳಲ್ಲಿ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ತೋರಿರುವ ನಿರ್ವಾಹಕ ಮತ್ತು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ತೊಂದರೆ: ನಂಜನಗೂಡಿನಿಂದ ಸೂರಹಳ್ಳಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್‌ಗಳು ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ನೌಕರರು ಮತ್ತು ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ವಿದ್ಯಾರ್ಥಿಗಳು 5 ಕಿ.ಮೀ. ತನಕ ನಡೆದೇ ಶಾಲೆ, ಕಾಲೇಜುಗಳಿಗೆ ನಿತ್ಯ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ನಂಜನಗೂಡಿನಿಂದ ಮುದ್ದಹಳ್ಳಿ, ನವಿಲೂರು, ಮಾರ್ಗವಾಗಿ ಕಸುವಿನ ಹಳ್ಳಿಗೆ ಹೋಗುವ ಬಸ್ ಗಳನ್ನು ಸೂರಹಳ್ಳಿ ಗ್ರಾಮದವರೆಗೂ ಮುಂದುವರಿಸಬೇಕು ಎಂದು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಈ ಕೂಡಲೇ ಸೂರಹಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ರೈತರು ಪಟ್ಟುಹಿಡಿದರು.

ಮನವಿ ಅರ್ಪಣೆ:ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಡಿಪೋ ವ್ಯವಸ್ಥಾಪಕಿ ಪುಷ್ಪಾ, ಮೈಸೂರು ನಗರ ಸಾರಿಗೆ ಇಲಾಖೆ ವಿಭಾಗೀಯ ವ್ಯವಸ್ಥಾಪಕ ವೀರೇಶ ತ್ಯಾಪಿ, ಅಧಿಕಾರಿಗಳಾದ ಕಲಾಶ್ರೀ, ವಾಣಿ ಆಗಮಿಸಿ ರೈತರ ಮನವಿ ಆಲಿಸಿದರು. ಕ್ರಮಕ್ಕೆ ಮುಂದಾಗುವ ಭರವಸೆ ನೀಡಿದರು. ರೈತ ಸಂಘಟಕರ ಆಗ್ರಹದ ಮೇರೆಗೆ ಚಾಲಕ, ನಿರ್ವಾಹಕರನ್ನು ಸ್ಥಳಕ್ಕೆ ಕರೆಸಿದರು. ಅನುಚಿತ ವರ್ತತೆ ತೋರಿದ ಅವರಿಬ್ಬರೂ ಕ್ಷಮೆ ಯಾಚಿಸಿದರು. ಮನವಿ ಪತ್ರ ಸಲ್ಲಿಸಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಮತ್ತು ತಾಲೂಕು ಘಟಕ ಅಧ್ಯಕ್ಷ ಸತೀಶ್ ರಾವ್, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಸೂರಹಳ್ಳಿ ಗ್ರಾಮ ಘಟಕದ ಗೌರವಾಧ್ಯಕ್ಷ ಮಲ್ಲೇಶ ಶೆಟ್ಟಿ, ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಕೃಷ್ಣ, ಮುಖಂಡರಾದ ಉಪ್ಪನ ಹಳ್ಳಿ ದೇವರಾಜ, ಸಿದ್ದರಾಜು, ಮೋಹನ ಇತರರು ಭಾಗವಹಿಸಿದ್ದರು.