ದಸರಾದಲ್ಲಿ ಕಂಬಳ ನಡೆಸುವುದನ್ನು ವಿರೋಧಿಸಿ ಮಂಗಳವಾರ ‘ಪರಿಸರಕ್ಕಾಗಿ ನಾವು’ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.  
ಜಿಲ್ಲೆ

ದಸರಾದಲ್ಲಿ ಕಂಬಳ ಆಯೋಜನೆ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ದಸರಾ ಉತ್ಸವದಲ್ಲಿ ಕಂಬಳ ನಡೆಸಬಾರದು ಎಂದು ಆಗ್ರಹಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯ ನೇತೃತ್ವದಲ್ಲಿ ವಿವಿಧ ಸಂಘಟ ನೆಗಳ ವತಿಯಿಂದ ಕಂಬಳ ನಡೆಸಲು ಉದ್ದೇಶಿಸಿರುವ ಸಾತಗಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ 217 ತಾಲೂಕು ಬರಗಾಲಕ್ಕೆ ತುತ್ತಾಗಿ ಕುಡಿಯ ನೀರಿಗೂ ದನ ಕರುಗಳ ಮೇವೂಗು ರೈತರು ಸಂಕಷ್ಟ ಪಡುತ್ತಿರುವಾಗ ಎರಡು ಕೋಟಿ ಲೀಟರ್‌ನಷ್ಟು ನೀರು ಬಳಸಿ ಕೋಣಗಳ ಓಡಿಸುವ ಕಂಬಳ ನಡೆಸುವುದು ಜನವಿರೋಧಿ ನೀತಿಯಾಗಿದೆ. 10 ಕೋಟಿ ರೂ. ಹಣ ಖರ್ಚು ಮಾಡಿ ಕಂಬಳ ನಡೆಸುವ ಔಚಿತ್ಯವೇನು? ಪರಿಸರದ ಬಗ್ಗೆ ಕಾಳಜಿ ಇಲ್ಲದೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.

ಅ.12 ರೊಳಗೆ ಕಂಬಳ ಆಯೋಜನೆ ರದ್ದುಪಡಿಸಲು ನಿರ್ಧಾರ ಕೈಗೊಳ್ಳದೆ ಹೋದರೆ ಪರಿಸರಕ್ಕಾಗಿ ನಾವು ಸಂಘಟನೆಯ ಅಡಿಯಲ್ಲಿ ಎಲ್ಲ ಸಂಘಟನೆಗಳು ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಮೇಲಿನ ಗಡುವಿನೊಳಗೆ ಕಂಬಳ ಆಯೋಜನೆಯನ್ನು ಸರ್ಕಾರ ರದ್ದು ಪಡಿಸದಿದ್ದರೆ ಮುಂದಿನ ಹೋರಾಟ ರೂಪಿಸಲು ಪ್ರಬಲವಾಗಿ ಹಮ್ಮಿಕೊಳ್ಳಲು ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ 18 ಜನರ ಒಂದು ಸಮಿತಿ ರಚಿಸಲಾಯಿತು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ನಂಜುಂಡೇಗೌಡ, ಕೆಂಪುಗೌಡ, ಗುರುಪ್ರಸಾದ್ ಕೆರೆಗೂಡು, ಬೆಟ್ಟಯ್ಯ ಕೋಟೆ, ಮಾ.ಗು. ಸದಾನಂದಯ್ಯ, ಪರಶುರಾಮೇಗೌಡ, ರವಿಕುಮಾರ್, ಭಾನುಮೋಹನ್, ಲೀಲಾ ಶಿವಕುಮಾರ್, ಸೋಮಸುಂದರ್, ಮನ್ಸೂರ್ ಹಮದ್, ಎಸ್.ನಾರಾಯಣ್ ಹಾಗೂ ಇತರರು ಪಾಲ್ಗೊಂಡಿದ್ದರು.