ಮೈಸೂರು: ರಾಜ್ಯದ ಎಲ್ಲ ಜನರಿಗೂ ಅಗತ್ಯ ವೈದ್ಯರು, ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ)ದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಪುರಭವನದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಹೆಚ್ಚಾಗಿದೆ. ದೊಡ್ಡಾಸ್ಪತ್ರೆಗಳಲ್ಲಿ ಐಸಿಯು ಇಲ್ಲದೇ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ದೂರಿದರು.
ಆಸ್ಪತ್ರೆಗಳಲ್ಲಿ ಮೂಲಸೌಲಭ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಜನರ ಆರೋಗ್ಯ ಸೇವೆಯ ಜವಾಬ್ದಾರಿ ಸರ್ಕಾರದ್ದೇ ಆಗಿದ್ದು, ಸಾಮಾಜಿಕ ಬದ್ಧತೆ ಆಗಿರಬೇಕು. ಬಹುತೇಕ ಸರ್ಕಾರಿ ಸಂಸ್ಥೆಗಳೇ ಜನರಿಗೆ ತಕ್ಕಮಟ್ಟಿಗೆ ಒಳ್ಳೆಯ ಚಿಕಿತ್ಸೆ ಒದಗಿಸುತ್ತಿದ್ದವು. ಆದರೆ 1990ರ ದಶಕದಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಬಳಿಕ ಖಾಸಗಿ ಉದ್ದಿಮೆಯಾಗಿ ಬದಲಾಗಿದೆ ಎಂದು ಆರೋಪಿಸಿದರು.
ಇತ್ತೀಚಿನ ದಶಕಗಳಲ್ಲಿ ಇದು ಕಾರ್ಪೊರೇಟೀಕರಣಕ್ಕೆ ಒಳಗಾದ ಬಳಿಕವಂತೂ ಸಾರ್ವಜನಿಕ ಆರೋಗ್ಯ ಸೇವೆ ಸರ್ಕಾರದ ಅಸೀಮ ನಿರ್ಲಕ್ಷೃಕ್ಕೆ ಒಳಗಾಗಿದೆ. ದೇಶದ ಜನತೆಗೆ ಒಳ್ಳೆಯ ದಿನಗಳನ್ನು ಕೊಡುತ್ತೇವೆಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತಂದಿದೆ. ಆದರೆ ಪ್ರತಿಯೊಂದು ಚಿಕಿತ್ಸೆ, ಪರೀಕ್ಷೆಗೆ ದರ ನಿಗದಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಯುಷ್ಮಾನ್ ಭಾರತ್ ಕಾರ್ಡ್, ಬಿಪಿಎಲ್ ಕಾರ್ಡ್ ಇರುವವರನ್ನು ಹೊರತುಪಡಿಸಿ ಉಳಿದವರು ಚಿಕಿತ್ಸೆಯ ದರ ಭರಿಸಬೇಕಾಗುತ್ತದೆ. ಬಡ ರೋಗಿಯೊಬ್ಬ ಬಿಪಿಎಲ್ ಕಾರ್ಡ್ ಹೊಂದಿಲ್ಲದಿದ್ದರೆ ದರ ಪಾವತಿಸಬೇಕು. ಇದರಿಂದ ಅಂತಿಮವಾಗಿ ಬಿಪಿಎಲ್ ಕಾರ್ಡ್ ಇಲ್ಲದವರೆಲ್ಲ ಖಾಸಗಿ ಆಸ್ಪತ್ರೆಗೆ ಹೋಗಲು ತಳ್ಳಿದಂತಾಗುತ್ತದೆ. ಹೀಗಾಗಿ ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಹಕ್ಕೋತ್ತಾಯಗಳು
ಮೈಸೂರಿನ ಜಿಲ್ಲಾ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಎಸ್‌ಎಂಟಿ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಮತ್ತು ಆರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎ.ಶಿವರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಆಸ್ಪತ್ರೆಗಳಿಗೆ ಗುಣಮಟ್ಟದ ಔಷಧ ಪೂರೈಕೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಬೇಕು. ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಬಜೆಟ್ ಹೆಚ್ಚಿಸಬೇಕು. ಆರೋಗ್ಯ ಇಲಾಖೆಯ ಭ್ರಷ್ಟಾಚಾರ, ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು ಆಗ್ರಹಿಸಲಾಯಿತು.
ಹೊಸ ತಾಲೂಕುಗಳಾದ ಸರಗೂರು, ಸಾಲಿಗ್ರಾಮಗಳಲ್ಲಿ ತಾಲೂಕು ಆಸ್ಪತ್ರೆ ನಿರ್ಮಿಸಿ, ವರುಣ, ತಗಡೂರು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಕಾಡಂಚಿನ ಪ್ರದೇಶಗಳಿಗೆ ಸಂಚಾರಿ ಆಸ್ಪತ್ರೆ ಕಲ್ಪಿಸಿ, ಆರೋಗ್ಯ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಕರ್ನಾಟಕದಲ್ಲಿ ಬಾಣಂತಿಯರ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಮುಖಂಡರಾದ ಜಿ.ಎಸ್.ಸೀಮಾ, ಪಿ.ಎಸ್. ಸಂಧ್ಯಾ, ವಿ.ಯಶೋಧರ, ಹರೀಶ್, ಟಿ.ಆರ್. ಸುನೀಲ್, ಸುಭಾಷ್, ಬಸವರಾಜು, ಸುಮಾ, ಚಂದ್ರಕಲಾ, ಅಸಿಯಾ ಬೇಗಂ, ನೀತುಶ್ರೀ ಇತರರು ಇದ್ದರು.