ಮೈಸೂರು: ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎನ್ನುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿಕೆ ಖಂಡಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಚುನಾವಣೆ ಭಾಷಣದಲ್ಲಿ ಕಾವೇರಿ ಸಮಸ್ಯೆಯನ್ನು ಡಿಎಂಕೆ ರಾಜಕೀಯ ದಾಳವನ್ನಾಗಿ ಪ್ರಯೋಗ ಮಾಡುತ್ತಿರುವುದು ದುರದೃಷ್ಟಕರ. ಇದು ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾದದ್ದು. ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲವೆಂದು ಹೇಳಿರುವುದು ಖಂಡನೀಯ ಎಂದರು.
ಕಾವೇರಿ ವಿಷಯದಲ್ಲಿ ಇಷ್ಟೆಲ್ಲ ಬೆಳವಣಿಗೆ ಆಗುತ್ತಿದ್ದರೂ ಕರ್ನಾಟಕದಲ್ಲಿರುವ ಯಾವ ರಾಜಕೀಯ ಪಕ್ಷಗಳೂ ಇದರ ಬಗ್ಗೆ ಧ್ವನಿ ಎತ್ತದೆ ಇರುವುದು ದುರಂತ. ಕರ್ನಾಟಕದಿಂದ ಅನುಕೂಲ ಪಡೆದು ರಾಜ್ಯದ ಜನತೆಗೆ ಚೂರಿ ಹಾಕುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವ್ಯಾಪಕ ವಿರೋಧದ ನಡುವೆಯೂ ಅಂದಿನ ಕರುಣಾನಿಧಿ ಸರ್ಕಾರ ಹೋಗೆನಕಲ್ ಯೋಜನೆಯನ್ನು ಜಾರಿಗೆ ತಂದು ಧರ್ಮಪುರಿ, ಕೃಷ್ಣಗಿರಿಗೆ ನೀರನ್ನು ಪೂರೈಸಿತು. ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ಜಾರಿಗೆ ಹೋರಾಟದ ನಾಟಕವಾಡಿದರು. ಆದರೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಯೋಜನೆ ಜಾರಿಗೆ ಮುಂದಾಗಿಲ್ಲ ಎಂದು ದೂರಿದರು.
ತಮಿಳುನಾಡಿನ ಹೇಳಿಕೆಗೆ ಮೌನವಾಗಿರುವುದನ್ನು ನೋಡಿದರೆ ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಕೈಗೊಂಬೆಗಳೇ ಹೊರತು ಇವರಿಂದ ರಾಜ್ಯದ ಜನತೆಗೆ, ಅನ್ನದಾತರಿಗೆ ಕಿಂಚಿತ್ತೂ ಉಪಯೋಗವಿಲ್ಲ. ಕಾವೇರಿ ಕೊಳ್ಳದ ಮತದಾರರು ನಿಮ್ಮ ಮನೆಯ ಬಾಗಿಲಿಗೆ ಬರುವ ಅಭ್ಯರ್ಥಿಗಳನ್ನು ಮೊದಲು ಕಾವೇರಿ ಸಮಸ್ಯೆ ಬಗೆಹರಿಸಿ ನಂತರ ಮತಯಾಚಿಸಿ ಎಂದು ಒತ್ತಾಯಿಸಿ ಎಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್‌ಬಾಬು, ಗೋಪಿ, ಎಲ್‌ಐಸಿ ಸಿದ್ದಪ್ಪ, ಗೋವಿಂದರಾಜ್, ಅರವಿಂದ್, ಮದನ್, ಬೀಡಾಬಾಬು, ಸ್ವಾಮಿಗೈಡ್, ಹರೀಶ್, ಮಾದಪ್ಪ, ಕಾವೇರಮ್ಮ, ಮಾಲಿನಿ, ಪುಷ್ಪಲತಾ, ಸುನೀಲ್, ಸಿದ್ದರಾಮನಾಯಕ ಇತರರು ಇದ್ದರು.