ಜಿಲ್ಲೆ

ಮಣಿಪುರ ಗಲಬೆ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ಮಣಿಪುರದಲ್ಲಿ ನಡೆಯುತ್ತಿರುವ ಗಲಬೆ ನಿಯಂತ್ರಿಸಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಮಂಗಳವಾರ ಪ್ರತ್ಯೇಕ ಎರಡು ಪ್ರತಿಭಟನೆ ನಡೆಯಿತು.

ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ (ಸಿಐಟಿಯು) ನಗರದ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿರುವುದು ಖಂಡನೀಯ. ಮಣಿಪುರ ಗಲಬೆಯಿಂದ ನೂರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಒಡೆದು ಹಾಳುವ ನೀತಿಯೇ ಈ ಪರಿಸ್ಥಿತಿಗೆ ಕಾರಣ. ಕೂಡಲೇ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷ ಜಿ. ಜಯರಾಂ, ಕರ್ನಾಟಕ ಪ್ರಾಂತ ರೈತ ಸಂಘ ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ ಹಾಗೂ ಇತರರು ಪಾಲ್ಗೊಂಡಿದ್ದರು.

ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ನಗರದ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಯಿತು. ಗಲಬೆ ನಿಯಂತ್ರಿಸಲು ವಿಫಲ ವಾಗಿರುವ ಮಣಿಪುರ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು, ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಿ ಹೆದ್ದಾರಿಯನ್ನು ಸಂಚಾರ ಮುಕ್ತಗೊಳಿಸಿ ಅಗತ್ಯ ಆಹಾರ ಮತ್ತು ಔಷಧ ಸರಬರಾಜು ಮಾಡಬೇಕು ಎಂದು ಆಗ್ರಹಿಸಲಾಯಿತು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ ಪ್ರತಿಭಟನೆ ನೇತೃತ್ವ ವಹಿಸಿದ್ದರು.