ಮೈಸೂರು: ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿದ ಸಮಿತಿ ಸದಸ್ಯರು, ಮುಖಂಡರು, ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಘೋಷಣೆ ಕೂಗಿದರು.
ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಬದಲಾವಣೆ ಮಾಡುವ ಮಾತುಗಳನ್ನಾಡಿದ್ದಾರೆ. ಸಂವಿಧಾನದಡಿ ಕೆಲಸ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿ ಸಂಸದರಾಗಿರುವವರೇ ಸಂವಿಧಾನ ವಿರೋಧಿ ಮಾತುಗಳನ್ನಾಡುತ್ತಿರುವುದು ಖಂಡನೀಯ. ಸಂವಿಧಾನವನ್ನು ದುರ್ಬಲಗೊಳಿಸಿ, ಮಾನವೀಯ ಅಂತಃಕರಣ ನಾಶ ಮಾಡುವ ಜೀವ ವಿರೋಧಿ ಕೃತ್ಯಗಳು ಬಹಿರಂಗವಾಗುತ್ತಿವೆ ಎಂದು ಕಿಡಿ ಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಮೇಲೆ ಬದ್ಧತೆ ಇದ್ದರೆ ಅನಂತಕುಮಾರ್ ಹೆಗಡೆ ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಿ, ಅವರ ವಿರುದ್ಧ ಕ್ರಮ ಜರುಗಿಸಬೇಕು. ಸಂವಿಧಾನ ವಿರೋದಿ, ಪ್ರಜಾಪ್ರಭುತ್ವ ವಿರೋಧಿ ದೇಶದ್ರೋಹಿ ಆಗಿರುವುದರಿಂದ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಗೋಪಾಲಕೃಷ್ಣ, ಸೋಸಲೆ ಸಿದ್ದರಾಜು, ಕಾಳಚನ್ನೇಗೌಡ, ಗುರುರಾಜ್, ಪಲ್ಲವಿ ಬೇಗಂ, ಗೋವಿಂದರಾಜು, ಸೋಮಯ್ಯ ಮಲೆಯೂರು, ಅಶೋಕಪುರಂ ಕುಮಾರ್ ಇತರರು ಇದ್ದರು.