ಜಿಲ್ಲೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ

ಸದೇಶ್ ಕಾರ್ಮಾಡ್

ಮೈಸೂರು: ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ಸೇನಾಪಡೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರಸ್ತುತ ಇರುವ ಕಾಯ್ದೆಯು ರೈತರಿಗೆ ಹಾಗೂ ಸಗಟು ಮಾರಾಟಗಾರರಿಗೆ ಅನುಕೂಲವಾಗಿದೆ. ಆದರೆ, ಚಿಲ್ಲರೆ ವ್ಯಾಪಾರಿಗಳಿಗೂ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಸರಿಯಲ್ಲ. ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲಿ ಎಂಬ ಕಾರಣಕ್ಕೆ ಎಪಿಎಂಸಿಯನ್ನು ಪ್ರಾರಂಭಿಸಲಾಯಿತು. ಆದರೆ, ಸರ್ಕಾರ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಹಳೇ ಸಂತೆಪೇಟೆಯಲ್ಲಿ ಎಪಿಎಂಸಿ ಲೈಸನ್ಸ್ ಹೊಂದಿದ ಸಗಟು ವ್ಯಾಪಾರಿಗಳಿಗೆ ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿ ವ್ಯಾಪಾರ, ವಹಿವಾಟು ನಡೆಸಲು ಖಾಲಿ ನಿವೇಶನಗಳನ್ನು ಜ್ಯೇಷ್ಠತೆ ಆಧಾರದ ಮೇಲೆ ಹಂಚಿಕೆ ಮಾಡಲಾಯಿತು. ಹಂಚಿಕೆಯಾದ ನಿವೇಶನದಲ್ಲಿ ಎಪಿಎಂಸಿ ಕಚೇರಿಯಿಂದ ಮಂಜೂರು ಮಾಡಿರುವ ನಕ್ಷೆ, ಪ್ಲಾನ್ ಪ್ರಕಾರವೇ ಕಟ್ಟಡ ನಿರ್ಮಾಣ ಮಾಡಬೇಕಾಗಿತ್ತು. ಆದರೆ ಕೆಲವು ವ್ಯಾಪಾರಿಗಳು ನಿವೇಶನಗಳನ್ನು ಹಲವು ಭಾಗಗಳಾಗಿ ವಿಂಗಡಿಸಿ ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದಾರೆ. ಅಲ್ಲದೆ, ವ್ಯಾಪಾರ ನಡೆಸಲು ಕಾನೂನು ಬಾಹಿರವಾಗಿ ಬಾಡಿಗೆಗೆ ನೀಡಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತಿದ್ದು, ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಪಿಎಂಸಿಯಲ್ಲಿ ಎಪಿಎಂಸಿ ಲೈಸನ್ಸ್ ಹೊಂದಿರುವವರು ತಮಗೆ ಇಷ್ಟಬಂದ ಹಾಗೆ ಮಳಿಗೆಗಳನ್ನು ನಿರ್ಮಿಸಿ ಚಿಲ್ಲರೆ ವ್ಯಾಪಾರ ವಹಿವಾಟು ನಡೆಸಲು ಮಳಿಗೆಗಳನ್ನು ಕಾನೂನು ಬಾಹಿರವಾಗಿ ಬಾಡಿಗೆಗೆ ನೀಡಿದ್ದಾರೆ. ಅವರ ಹಿತ ಕಾಯುವ ಉದ್ದೇಶದಿಂದ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಕೃಷ್ಣಪ್ಪ, ಹನುಮಂತಯ್ಯ, ನಾಗರಾಜ್, ವರಕೋಡು ಕೃಷ್ಣೇಗೌಡ, ದಯಾನಂದ, ಸಿಂಧುವಳ್ಳಿ ಶಿವಕುಮಾರ್, ರವೀಶ್ ಹಾಗೂ ಇತರರು ಪಾಲ್ಗೊಂಡಿದ್ದರು.