ವಿಜಯವಾಣಿ ಸುದ್ದಿಜಾಲ ಕಡಬ
ಹಲವು ವರ್ಷಗಳಿಂದ ತಾರ್ಕಿಕ ಅಂತ್ಯ ಕಾಣದ ಕಸ್ತೂರಿ ರಂಗನ್ ವರದಿಯ ವಿರುದ್ಧ ನ.15ಕ್ಕೆ 50 ಸಾವಿರ ಜನರನ್ನು ಸೇರಿಸಿಕೊಂಡು ಸುಬ್ರಹ್ಮಣ್ಯದಲ್ಲಿ ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಪ್ರತಿ ಮನೆಯಿಂದಲೂ ಬರಬೇಕು ಅಲ್ಲದೆ ಮುಂದಿನ ದಿನಗಳಲ್ಲಿ ನಮ್ಮಲ್ಲಿ ಎಲ್ಲ ದಾಖಲೆಗಳು ಇರುವುದರಿಂದ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ಮಲೆನಾಡು ಜನಹಿತ ರಕ್ಷಣೆ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಶುಕ್ರವಾರ ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಅರಣ್ಯ ಭೂಮಿಗಳನ್ನು ಜಂಟಿ ಸರ್ವೆ ಮಾಡುವುದು, ಪಶ್ಚಿಮಘಟ್ಟ ಪ್ರದೇಶಕ್ಕೆ ಗಡಿ ಗುರುತು ಮಾಡುವುದು ಮತ್ತು ಅರಣ್ಯ ಭೂಮಿಗಳಿಗೆ ಬಫರ್ ಜೋನ್ ಇಡಬಾರದು ಇಷ್ಟು ಅಂಶಗಳನ್ನು ಸರ್ಕಾರ ಮಾಡಿದರೆ ಯಾವ ಅರಣ್ಯ ರಕ್ಷಣೆಯ ವರದಿಗೂ ರೈತರು ಭಯಪಡಬೇಕಿಲ್ಲ. ಪ್ರಸ್ತುತ ಕಸ್ತೂರಿರಂಗನ್ ವರದಿಗೆ ನಮ್ಮ ವಿರೋಧವಿದೆ, ನಾವು ಪರಿಸರ ರಕ್ಷಣೆಗೆ ವಿರೋಧವಿಲ್ಲ, ಆದರೆ ಪರಿಸರ ಸಂರಕ್ಷಣೆಯ ನೆಪದಲ್ಲಿ ಜನರಿಗೆ ತೊಂದರೆ ಉಂಟು ಮಾಡುವುದನ್ನು ಸಹಿಸುವುದಿಲ್ಲ ಎಂದರು.
ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಕುಟ್ರುಪಾಡಿ ಗ್ರಾ.ಪಂ. ಮಾಜಿ ಸದಸ್ಯ ಮ್ಯಾತ್ಯೂ ಟಿ.ಎಂ.ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕುಟ್ರುಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಮನ, ಬಲ್ಯ ಗ್ರಾಮ ಸಮಿತಿ ಅಧ್ಯಕ್ಷ ಯೋಗೀಂದ್ರ ಉಪಸ್ಥಿತರಿದ್ದರು. ಕಡಬ ತಾಲೂಕು ಸಮಿತಿ ಸದಸ್ಯ ಧನಂಜಯ ಕೊಡಂಗೆ ಪ್ರಾಸ್ತಾವಿಸಿದರು. ಕುಟ್ರುಪ್ಪಾಡಿ ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ ಸ್ವಾಗತಿಸಿದರು, ಬಲ್ಯ ಗ್ರಾಮ ಸಮಿತಿಯ ಸಹ ಸಂಚಾಲಕ ಅಚ್ಯುತ ದೇರಾಜೆ ವಂದಿಸಿದರು. ಪ್ರತಿಭಟನೆ ಬಳಿಕ ಕುಟ್ರುಪ್ಪಾಡಿ ಪಿಡಿಒ ಆನಂದ ಗೌಡ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.