ಕೊಪ್ಪಳ: ನಗರ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ತಾಲೂಕು ಸಮಿತಿ ಪದಾಧಿಕಾರಿಗಳು ನಗರದ ನಗರಸಭೆ ಹಾಗೂ ತಾಪಂ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ನಗರ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬಡವರಿಗೆ ಇಂದಿಗೂ ಮೂಲ ಸೌಕರ್ಯ ಸಿಕ್ಕಿಲ್ಲ. ಸಣ್ಣ ಭೂ ಹಿಡುವಳಿದಾರರಿದ್ದರೂ ಮನೆ, ನಿವೇಶನ ಇಲ್ಲದ ಅನೇಕರಿದ್ದಾರೆ. ಅಂತವರಿಗೆ ಸೂರು ಕಲ್ಪಿಸುವ ಕೆಲಸ ಆಡಳಿತ ಮಾಡುತ್ತಿಲ್ಲ. ಭೂಮಿ ಬೆಲೆ ದಿನ ಕಳೆದಂತೆ ಗಗನಕ್ಕೇರುತ್ತಿದೆ. ಬಡವರಿಗೆ ಖರೀದಿಸುವುದು ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನರೇಗಾ ಕೆಲಸವನ್ನೇ ಅವಲಂಬಿಸಿ ಬಹುತೇಕರು ಜೀವನ ನಡೆಸುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಬಡವರು, ಅರ್ಹರಿಗೆ ನಿವೇಶನ ಒದಗಿಸಿ. ಕೊಪ್ಪಳದ 2 ಸಾವಿರ ಗುಂಪು ಮನೆಗಳಲ್ಲಿ ಹಾಳಾದ ಮನೆ ದುರಸ್ತಿ ಮಾಡಿಸಿ. ವಿದ್ಯುತ್ ಸೇರಿ ಮೂಲ ಸೌಕರ್ಯ ಕಲ್ಪಿಸಿ. ಅಗತ್ಯ ಇರುವೆಡೆ ಸಾರ್ವಜನಿಕ ಶೌಚಗೃಹ ನಿರ್ಮಿಸಿ. ವಿವಿಧ ಗ್ರಾಮಗಳಲ್ಲಿ ನಿವೇಶನ ರಹಿತರ ಸರ್ವೇ ನಡೆಸಿ. ಅರ್ಹರಿಗೆ ಮೊದಲ ಆದ್ಯತೆಯಡಿ ನಿವೇಶನ ನೀಡಿ. ಒಮ್ಮೆ ನೀಡಿದವರಿಗೆ ಮತ್ತೊಮ್ಮೆ ನೀಡದಂತೆ ನೋಡಿಕೊಳ್ಳಿ. ನರೇಗಾ ಕೂಲಿಕಾರರಿಗೆ ಕೂಲಿ ಕೆಲಸ, ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿದರು. ಬಳಿಕ ನಗರಸಭೆ ಪೌರಾಯುಕ್ತ ಹಾಗೂ ತಾಪಂ ಇಒಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಕಾರರಾದ ಸುಂಕಪ್ಪ ಗದಗ, ಬಸವರಾಜ ಮೇಳಿ, ಮೈಲಾರಿ ಗಾಳಿ, ನಿಂಗಪ್ಪ ಹಳ್ಳಿ, ಸಾರೆಪ್ಪ ತಂಬೂರಿ, ಕೀರಮ್ಮ ಮಿರಗನತಂಡಿ, ಅಮರವ್ವ ಗದಗ, ರೇಖಾ ಅಕಾರಿ, ರೇಣುಕಮ್ಮ ಇಡಗಲ್, ಬಂದಮ್ಮ ಹಕಾರಿ, ಬಿಬಿಜಾನ ಮುಜಾವರ್, ಹುಲುಗಪ್ಪ ಗೋಕಾವಿ ಇತರರಿದ್ದರು.