ಕೆ.ಆರ್.ನಗರ: ಗ್ರಾಮಲೆಕ್ಕಿಗರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಮಾತನಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ಹೊಸ ಅಗ್ರಹಾರದಲ್ಲಿ ಬುಧವಾರ ಗ್ರಾಮಲೆಕ್ಕಿಗರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳು ನಿಮ್ಮ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ಸಾಕಷ್ಟು ಚರ್ಚೆ ಮಾಡಿದ್ದಾರೆ. ಹಾಗಾಗಿ ಶೀಘ್ರದಲ್ಲೇ ನಿಮ್ಮ ಬೇಡಿಕೆಗಳಲ್ಲಿ ಒಂದಷ್ಟು ಸಡಿಲಿಕೆ ಮಾಡುವ ಮೂಲಕ ನಿಮ್ಮ ಪರವಾಗಿ ಸರ್ಕಾರ ನಿಲ್ಲಲಿದೆ. ಹಂತ ಹಂತವಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದರ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಗ್ರಾಮಲೆಕ್ಕಿಗರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ. ಹಾಗಾಗಿ ಯಾವುದೇ ಭಯ ಬೇಡ. ವ್ಯಾಪ್ತಿಗೆ ಸಂಬಂಧಪಟ್ಟಂತೆ ನಿಮಗೆ ಅನುಕೂಲವಾಗುವಂತಹ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಕೆಡಿಪಿ ಸಭೆಯಲ್ಲಿ ಚರ್ಚಿಸುತ್ತೇನೆ. ಜತೆಗೆ ತಹಸೀಲ್ದಾರ್ ಅವರೊಂದಿಗೂ ಮಾತನಾಡುತ್ತೇನೆ. ಹೆಚ್ಚು ಒತ್ತಡ ನೀಡದೆ ಸಮಯಕ್ಕೆ ತಕ್ಕಂತೆ ರೈತರಿಗೆ ನೀವು ಕೆಲಸ ಮಾಡುವಂತಹ ಮಾರ್ಗಗಳ ಬಗ್ಗೆ ಚರ್ಚಿಸುತ್ತೇನೆ ಎಂದರು.
ನಿಮ್ಮ ಕೆಲಸಗಳಿಗೆ ಅನುಕೂಲವಾಗಲಿ ಎಂದೇ ಸರ್ಕಾರ ಆ್ಯಪ್‌ಗಳನ್ನು ಮಾಡಿದೆ. ಇದರಿಂದ ರೈತರ ಕೆಲಸಗಳು ಶೀಘ್ರದಲ್ಲೇ ಆಗುತ್ತವೆ. ನಿಮಗೂ ಹೆಚ್ಚಿನ ಶ್ರಮ ಇರುವುದಿಲ್ಲ. ಆದರೆ ಅದಕ್ಕೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಸರ್ಕಾರ ಹೆಚ್ಚಿನ ಜವಾಬ್ದಾರಿ ವಹಿಸಲಿದೆ. ಅಂತರ ಜಿಲ್ಲಾ ವರ್ಗಾವಣೆ ಮತ್ತು ಪದನ್ನೋತಿ ಸೇರಿದಂತೆ ಮುಖ್ಯ ಅಂಶಗಳ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ತಿಳಿಸಿದರು.
ಗ್ರಾಮಲೆಕ್ಕಿಗರ ತಾಲೂಕು ಸಂಘದ ಮಹಿಳಾ ಅಧ್ಯಕ್ಷೆ ಐಶ್ವರ್ಯ, ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸಿ.ಪಿ.ರಮೇಶ್, ಹೊಸ ಅಗ್ರಹಾರ ಗ್ರಾಪಂ ಅಧ್ಯಕ್ಷೆ ಮಾದೇವಮ್ಮ, ಉಪಾಧ್ಯಕ್ಷೆ ಆಶಾರಾಣಿ, ಉಪ ತಹಸೀಲ್ದಾರ್ ಕೃಷ್ಣಮೂರ್ತಿ, ಆರ್‌ಐ ಶಶಿಕುಮಾರ್, ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಖಜಾಂಚಿ ಜ್ಯೋತಿಪಾಟೀಲ್, ಕಾರ್ಯದರ್ಶಿ ದೀಪಾಶ್ರೀ ಇನ್ನಿತರರು ಇದ್ದರು.