ಜಗಳೂರು: ಕೇಂದ್ರ ಗೃಹ ಸಚಿವ ಅಮಿತಾ ಷಾ ಹೇಳಿಕೆ ಖಂಡಿಸಿ ಸೋಮವಾರ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ, ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ವಕೀಲರ ಸಂಘದ ತಾಲೂಕಾಧ್ಯಕ್ಷ ಟಿ. ಬಸವರಾಜ್ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆಯನ್ನು ದೇಶದ ವಕೀಲರ ಸಂಘ-ಸಂಸ್ಥೆಗಳು ಖಂಡಿಸುತ್ತವೆ. ದಲಿತರು ಶೋಷಣೆಗೆ ಒಳಗಾಗಿದ್ದಾಗ ಯಾವ ದೇವರೂ ಸಹ ನಮ್ಮನ್ನು ಕಾಪಾಡಲಿಲ್ಲ. ಸಂವಿಧಾನವೊಂದೇ ದಲಿತರಿಗೆ ರಕ್ಷಣೆ ನೀಡಿ ಸಮಾನತೆ ಕಲ್ಪಿಸಿದೆ ಎಂದರು.
ಸರ್ವ ಜನಾಂಗದವರು ಸಮಾನತೆ, ಸಹಬಾಳ್ವೆಯಿಂದ ಜೀವನ ನಡೆಸಲಿ, ಪ್ರತಿಯೊಬ್ಬರಿಗೂ ನ್ಯಾಯ ಸಿಗಲಿ ಎಂದು ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನದ ಮೂಲಕ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಕಲ್ಪಿಸಿದ್ದಾರೆ. ಕೂಡಲೇ ಕೇಂದ್ರ ಗೃಹ ಸಚಿವರು ನೀಡಿದ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಬೇಕು. ಇಲ್ಲದಿದ್ದರೆ ದೇಶದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪರಶುರಾಮ್, ವಕೀಲರಾದ ಆರ್.ಓಬಳೇಶ್, ಶ್ರೀನಿವಾಸ್ ಸಿ.ಬಸವರಾಜ್, ಪಂಪಣ್ಣ, ಎಚ್.ಬಸವರಾಜಪ್ಪ, ನಾಗೇಶ್, ತಿಪ್ಪೇಸ್ವಾಮಿ, ಕುಂಬಾರ್, ಕೆ.ವಿ. ರುದ್ರೇಶ್, ಹಾಲಪ್ಪ, ಬಾಲಪ್ಪ, ರಂಗಪ್ಪ, ವೀರೇಶ್, ಮಹಾಂತೇಶ್, ಗೋಗುದ್ದು ತಿಪ್ಪೇಸ್ವಾಮಿ ಇತರರಿದ್ದರು.